

ಮಡಿಕೇರಿ: ಏ.೬ ರಂದು ಜರುಗಲಿರುವ ರಾಮನವಮಿ ಪ್ರಯುಕ್ತ ಮಡಿಕೇರಿಯ ಕೋದಂಡರಾಮ ದೇವಾಲಯದ ರಾಮೋತ್ಸವ ಸಮಿತಿ ವತಿಯಿಂದ ಏ.೫ ರಂದು ನಗರದಲ್ಲಿ ಬೃಹತ್ ಮೆರವಣಿಗೆ ಜರುಗಲಿದೆ ಎಂದು ರಾಮೋತ್ಸವ ಸಮಿತಿ ಅಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದರು.
ರಾಮೋತ್ಸವ ಸಂಬಂಧ ಕೋದಂಡರಾಮ ದೇವಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಜಾತಿ-ಸಂಘರ್ಷ ಹೆಚ್ಚಾಗುತ್ತಿದೆ. ಹಿಂದೂ ಧರ್ಮದಡಿಯಲ್ಲಿ ಎಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಮೂಡಿಸಲು, ಒಗ್ಗಟ್ಟನ್ನು ಪ್ರದರ್ಶಿಸಲು ಈ ಬಾರಿ ಜಿಲ್ಲೆಯಲ್ಲಿನ ಸರ್ವಜನಾಂಗದವರನ್ನು ಸೇರಿಸಿ ರಾಮೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ಮುಖ್ಯ ಸಮಿತಿ ಹಾಗೂ ಉಪಮಿತಿಗಳನ್ನೂ ರಚಿಸಲಾಗಿದೆ ಎಂದು ತಿಳಿಸಿದರು.
ಮಹಾನ್ ಪುರುಷ ರಾಮನ ರಾಜ್ಯದಲ್ಲಿ ದ್ವೇಷ ಇರಲಿಲ್ಲ, ಅಸೂಯೆ ಇರಲಿಲ್ಲ, ಜಾತಿ ವ್ಯವಸ್ಥೆ ಇರಲಿಲ್ಲ. ಈ ಕನಸ್ಸನ್ನು ಗಾಂಧೀಜಿ ನನಸ್ಸು ಮಾಡುವಂತೆ ಹೇಳಿದ್ದರು. ಈ ನಿಟ್ಟಿನಲ್ಲಿ ನಾವು ಸರ್ವಜನಾಂಗದವರನ್ನು ಒಳಗೊಂಡ ಸಮಿತಿ ಮಾಡಿದ್ದೇವೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಎಲ್ಲ ಸಮಾಜದವರನ್ನು ಆಹ್ವಾನಿಸಿದ್ದೇವೆ. ಮೆರವಣಿಗೆ ಸಂದರ್ಭ ತಮ್ಮ-ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿಯೇ ಆಗಮಿಸಿ ವಿವಿಧತೆಯಲ್ಲಿ ಏಕತೆ ಸಾರುವ ಹಿಂದೂ ಧರ್ಮದ ಒಗ್ಗಟ್ಟನ್ನು ಪ್ರದರ್ಶಿಸಲೂ ಮನವಿ ಮಾಡಿದ್ದೇವೆ. ೨ ದಿನಗಳ ಕಾಲ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೂಡ ವಿವಿಧ ಸಮಾಜದವರು ತಮ್ಮ-ತಮ್ಮ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ನಡೆಸಿಕೊಡಲೂ ಮನವಿ ಮಾಡಿದ್ದೇವೆ ಎಂದರು.
ಪ್ರಮುಖರಾದ ಡಾ.ಮೇಚೀರ ಸುಭಾಶ್ ನಾಣಯ್ಯ ಮಾತನಾಡಿ, ಇಂತಹ ಕಾರ್ಯಕ್ರಮಗಳು ಕೊಡಗಿನಾದ್ಯಂತ ನಡೆಯಬೇಕು. ಎಲ್ಲರೂ ಒಂದಾಗಿ ಸಾಮರಸ್ಯದಿಂದ ಬಾಳುವಂತಾಗಲಿ ಎಂದು ಆಶಿಸಿದರು.
ಎಫ್.ಎಂ.ಸಿ ಕಾಲೇಜಿನ ಪ್ರಾಧ್ಯಾಪಕ ಪ್ರೊಫೆಸರ್ ಮೇಚೀರ ರವಿಶಂಕರ್ ನಾಣಯ್ಯ ಮಾತನಾಡಿ, ಭಾರತ ದೇಶ ನಿರ್ಮಾಣದಲ್ಲಿ ಶ್ರೀರಾಮ-ಶ್ರೀಕೃಷ್ಣರು ಅಡಿಪಾಯ ಹಾಕಿದ್ದಾರೆ. ಅವರುಗಳು ಜೀವನ ಕ್ರಮ ಅನುಸರಣೆಯೇ ಹಿಂದೂ ಸಂಸ್ಕೃತಿ. ಕೊಡಗಿನಲ್ಲಿ ಇತ್ತೀಚೆಗೆ ಆದಂತಹ ಘಟನೆಗಳು ವಿಪರ್ಯಾಸ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಬಗೆಹರಿಸಬೇಕು. ರಾಮೋತ್ಸವವನ್ನು ವಿಜೃಂಭಣೆಯಿಂದ ಮಾಡುವ ಉದ್ದೇಶ ಹೊಂದಲಾಗಿದೆ. ಇಲ್ಲಿ ಎಲ್ಲರ ಭಾಗವಹಿಸುವಿಕೆ ಮುಖ್ಯ ಎಂದರು.
ಡಾ.ಚೌರೀರ ಶ್ಯಾಂ ಅಪ್ಪಣ್ಣ ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಕೂಡ ತಮ್ಮ-ತಮ್ಮ ಕೈಯಲ್ಲಾದಷ್ಟು ಧನಸಹಾಯ ಮಾಡಬೇಕೆಂದರು.
ಸಭೆಯಲ್ಲಿ ಪ್ರಮುಖರಾದ ಕೂಡಂಡ ರಾಜೇಂದ್ರ, ಕಾಳಚಂಡ ರಾಣಿ ಗಣಪತಿ, ಡಾ.ಯಶೋಧರ ಪೂಜಾರಿ, ರಾಮೋತ್ಸವ ಸಮಿತಿ ಖಜಾಂಚಿ ಡಾ.ಮೋಹನ್ ಅಪ್ಪಾಜಿ, ರಾಮೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ಕೋದಂಡರಾಮ ದಸರಾ ಸಮಿತಿ ಮಾಜಿ ಅಧ್ಯಕ್ಷೆ ಜಯಂತಿ ಶೆಟ್ಟಿ, ಪ್ರಮುಖರಾದ ಬಾಬು ನಾಯ್ಡು, ದೇವಾಲಯ ಟ್ರಸ್ಟ್ ಅಧ್ಯಕ್ಷ ನಂಜುಂಡ, ರಾಮ ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥ್, ರಾಮೋತ್ಸವ ಮಹಿಳಾ ಸಮಿತಿ ಅಧ್ಯಕ್ಷೆ ಭಾರತಿ ರಮೇಶ್ ಹಾಜರಿದ್ದರು.
ಮೆರವಣಿಗೆ ವಿಶೇಷ
ಏ.೫ ರಂದು ಸಂಜೆ ೩ ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಿಂದ, ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಕೋದಂಡರಾಮ ದೇವಾಲಯದಲ್ಲಿ ಸಮಾಪ್ತಿಗೊಳ್ಳಲಿದೆ. ಮೆರವಣಿಗೆಯು ಡೊಳ್ಳು ಮತ್ತು ಗೊಂಬೆ ಕುಣಿತ, ಚಂಡೆ, ದೀಪ ಕುಣಿತ, ಡ್ರಮ್ ಸೆಟ್, ಹೂ ಕುಣಿತ, ಹುಲಿವೇಷದೊಂದಿಗೆ ಆಕರ್ಷಣೀಯವಾಗಿ ನಡೆಯಲಿದೆ. ೨ ದಿನಗಳ ಕಾಲ ಸಂಜೆ ದೇವಾಲಯದ ಆವರಣದ ಎದುರು ಜ್ಯೋತಿ ಯುವಕ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಏ.೫ ರಂದು ಬೆಳಿಗ್ಗೆ ೬ ಗಂಟೆಯ ನಂತರ ದೇವಾಲಯದ ಪ್ರತಿಷ್ಠಾಪನಾ ಉತ್ಸವದ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಏ.೫ ಮತ್ತು ೬ರಂದು ಅನ್ನದಾನ ನಡೆಯಲಿದೆ.