

ರೋಣ: ತಾಲೂಕಿನ ಡ.ಸ. ಹಡಗಲಿ ಗ್ರಾಮದ ಶ್ರೀ ಅಮರಲಿಂಗ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶ್ರೀ ದೇವರ ಬೆಳ್ಳಿ ಕಳಸದ ಮೆರವಣಿಗೆ ಗುರುವಾರ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನ ಕಮಿಟಿ ಅಧ್ಯಕ್ಷ ಸಂಗನಗೌಡ ಅಪ್ಪನಗೌಡ ಮಾತನಾಡಿ, ಗ್ರಾಮದ ಶ್ರೀ ಅಮರಲಿಂಗ ಬಸವಣ್ಣ ಉದ್ಭವ ಮೂರ್ತಿಯಾಗಿದೆ. ಗ್ರಾಮಸ್ಥರ ಸಹಕಾರದಿಂದ ಶ್ರೀ ದೇವರಿಗೆ ಬೆಳ್ಳಿಯ ಕಳಸ ನಿರ್ವಿುಸಲಾಗಿದೆ ಎಂದರು.
ಗ್ರಾಮದ ಹಿರಿಯರಾದ ದೇವರಾಜ ಮೇಟಿ ಮಾತನಾಡಿ, ಜಾತ್ರಾ ಮಹೋತ್ಸವದ ಅಂಗವಾಗಿ ಐದು ದಿನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಆ. 8ರಂದು ಗ್ರಾಮ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ, 9ರಂದು ಹನುಮಂತ ದೇವರಿಗೆ ಮಹಾಪೂಜೆ ಹಾಗೂ ಪಾಲಕಿ ಉತ್ಸವ, 11ರಂದು ಮಧ್ಯಾಹ್ನ 2 ಗಂಟೆಗೆ ಹಗ್ಗದ ಮೆರವಣಿಗೆ, ಸಂಜೆ 5 ಗಂಟೆಗೆ ಮಹಾರಥೋತ್ಸವ ನಡೆಯಲಿದೆ. ರಾತ್ರಿ 10 ಗಂಟೆಗೆ ಶ್ರೀ ಬಸವೇಶ್ವರ ನಾಟ್ಯ ಸಂಘದಿಂದ ‘ಗರ್ಭದಲ್ಲಿ ಘರ್ಜಿಸಿದ ಗರುಡ’ ನಾಟಕ ಪ್ರದರ್ಶನಗೊಳ್ಳಲಿದೆ. 13ರಂದು ದುರ್ಗಾದೇವಿ ನಾಟ್ಯ ಸಂಘದಿಂದ ‘ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಮುಖಂಡ ಸಿದ್ದನಗೌಡ ಎಂ. ಮರಿಗೌಡ್ರ ಮಾತನಾಡಿ, ಗದಗ ಜಿಲ್ಲೆಯಲ್ಲಿಯೇ ಬೆಳ್ಳಿಯ ಕಳಸಾರೋಹಣ ಹಿರಿಮೆ ನಮ್ಮ ಹಡಗಲಿ ಗ್ರಾಮಕ್ಕೆ ಸಲ್ಲುತ್ತದೆ. ಸರ್ವರ ಸಹಕಾರದಿಂದ ದೇವಸ್ಥಾನಕ್ಕೆ ಈಗ ಕಳಸಾರೋಹಣ ಮಾಡಲಾಗಿದೆ ಎಂದರು.
ಇದೇ ವೇಳೆ ಕಳಸವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಬಸಲಿಂಗಪ್ಪಗೌಡ ಹಳ್ಳೂರ, ಮುತ್ತಣ್ಣ ಕುಂದರಗಿ, ದೇವರಾಜ ಮೇಟಿ, ನಿಂಗನಗೌಡ ಪಾಟೀಲ, ಶಿವಪ್ಪ ದಾನರೆಡ್ಡಿ, ಎಸ್.ಬಿ. ಮೇಟಿ, ಬಿ.ಬಿ. ಪಾಟೀಲ, ಬಿ.ಎಸ್. ಚೇಗರಡ್ಡಿ, ಗುಳಪ್ಪ ದಾನರೆಡ್ಡಿ, ಈಶ್ವರ ದಾನರೆಡ್ಡಿ, ಹಾಗೂ ವಿವಿಧ ಭಜನಾ ಸಂಘದ ಸದಸ್ಯರು ಇದ್ದರು.