

ತುರುವೇಕೆರೆ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಪಟ್ಟಣದಲ್ಲಿ ಗಣವೇಷಧಾರಿಗಳ ಪಥಸಂಚಲನ ವಿಜೃಂಭಣೆಯಿಂದ ನೆಡೆಯಿತು.
ಪಟ್ಟಣದ ಉಡಸಲಮ್ಮ ದೇವಾಲಯದ ಆವರಣದಲ್ಲಿ ಜಮಾವಣೆಗೊಂಡ ತಾಲೂಕಿನ ಸಾವಿರಾರು ಸ್ವಯಂ ಸೇವಕ ಸಂಘದ ಗಣವೇಷಧಾರಿಗಳು ಭಾರತಾಂಭೆ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ದ್ವಜಾ ವಂದನೆ ನೆರವೇರಿಸಿ ನಂತರ ಪಥಸಂಚಲನ ಆರಂಬಿಸಿದರು. ಸಣ್ಣ ಮಕ್ಕಳು ಸೇರಿದಂತೆ ಯುವ ಜನರು ಸ್ವಯಂ ಪ್ರೇರಿತರಾಗಿ ಗಣ ವೇಷಧಾರಿಗಳಾಗಿ ಭಾಗವಹಿಸಿದ್ದರು.
ಬೆಳಗ್ಗೆ 11.30ಕ್ಕೆ ಆರಂಭಗೊಂಡ ಪಥಸಂಚಲನ ಸಂತೆ ಮೈದಾನದಿಂದ ಪೋಸ್ಟ್ ಆಫೀಸ್ ಮೂಲಕ ಬಾಣಸಂದ್ರ ಸರ್ಕಲ್ನಿಂದ ಎಸ್.ಬಿ.ಎಂ ಬ್ಯಾಂಕ್ ರಸ್ತೆ ಮೂಲಕ ತಿಪಟೂರು ರಸ್ತೆಯಲ್ಲಿ ಸಾಗಿದ ಗಣವೇಷಧಾರಿಗಳು ಉಡಸಲಮ್ಮದೇವಿ ಆವರಣದಲ್ಲಿ ಸಂಪನ್ನಗೊಳಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಣವೇಷಧಾರಿಗಳು ಪಥಸಂಚಲನ ನೆಡೆಸುತ್ತಿದ್ದ ಸಂದರ್ಭದಲ್ಲಿ ಜೆಸಿಬಿ ಮೂಲಕ ಹೂ ಮಳೆ ಸುರಿಸಿದರೆ, ಪಟ್ಟಣದ ಜನರು ತಮ್ಮ ಮನೆ ಅಂಗಡಿ ಮುಂಭಾಗ ಸಾಗುವ ಗಣ ವೇಷಧಾರಿಗಳನ್ನು ಹೂಮಳೆ ಸುರಿಸಿ ಸ್ವಾಗತಿಸಿದರು.
ಗಣವೇಷಧಾರಿಗಳಾಗಿ ರಾಜ್ಯಸಭೆ ಸದಸ್ಯ ಹಾಗೂ ಚಿತ್ರನಟ ಜಗ್ಗೇಶ್, ಮಾಜಿ ಶಾಸಕರಾದ ಮಸಾಲಜಯರಾಮ್, ಎಂ.ಡಿ.ಲಕ್ಷಿ$್ಮನಾರಾಯಣ್ ಸೇರಿದಂತೆ ಆರ್.ಎಸ್.ಎಸ್ ಮುಖಂಡರು ಇದ್ದರು.