

ವಿರಾಜಪೇಟೆ: ಇತಿಹಾಸ ಪ್ರಸಿದ್ಧ ವಿರಾಜಪೇಟೆ ಗಣೇಶೋತ್ಸವ ಪ್ರಯುಕ್ತ ಗಣೇಶ ಮಂಟಪಗಳ ಶೋಭಾಯಾತ್ರೆ ಹಾಗೂ ವಿಸರ್ಜನೋತ್ಸವ ಸಂಭ್ರಮದಿಂದ ನಡೆಯಿತು.
ಪ್ರತಿ ವರ್ಷದಂತೆ ಅನಂತ ಚತುರ್ದಶಿಯಂದು ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಅಂತೆಯೆ ನಗರದ 22 ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಅದರಲ್ಲಿ ಮಹಾ ಗಣಪತಿ ದೇವಸ್ಥಾನ, ಜೈನರ ಬೀದಿಯ ಶ್ರೀ ಬಸವೇಶ್ವರ ದೇವಸ್ಥಾನ , ಅರಸುನಗರದ ವಿಘ್ನೇಶ್ವರ ಸೇವಾ ಸಮಿತಿ, ವಿನಾಯಕ ಯುವಕ ಭಕ್ತ ಮಂಡಳಿ, ತೆಲುಗರ ಬೀದಿಯ ಅಂಗಳ ಪರಮೇಶ್ವರಿ ದೇವಸ್ಥಾನ, ದಖನಿ ಮೊಹಲ್ಲಾದ ವಿಜಯ ವಿನಾಯಕ ಉತ್ಸವ ಸಮಿತಿ, ನೆಹರು ನಗರದ ನೇತಾಜಿ ಉತ್ಸವ ಸಮಿತಿ, ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ, ಪಂಜರ್ ಪೇಟೆಯ ಮಹಾ ಗಣಪತಿ ಸೇವಾ ಸಂಘ, ವಿನಾಯಕ ಸೇವಾ ಸಮಿತಿ , ಛತ್ರಕೆರೆಯ ಆಂಜನೇಯ ದೇವಸ್ಥಾನದ ಜಲದರ್ಶಿನಿ ವಿನಾಯಕ ಸೇವಾ ಸಮಿತಿ, ಗಾಂಧಿನಗರದ ಗಣಪತಿ ಸೇವಾ ಸಮಿತಿ, ಮೀನುಪೇಟೆಯ ವಿಶ್ವ ವಿನಾಯಕ ಸೇವಾ ಸಮಿತಿ, ಗೌರಿ ಕೆರೆಯ ಗಣಪತಿ ಉತ್ಸವ ಸಮಿತಿ, ಪುರಸಭೆಯ ವಿಘ್ನೇಶ್ವರ ಉತ್ಸವ ಸಮಿತಿ, ಅಯ್ಯಪ್ಪ ಬೆಟ್ಟದ ವರದ ವಿನಾಯಕ ಸೇವಾ ಸಮಿತಿ. ಶಿವಕೇರಿಯ ವಿನಾಯಕ ಯುವ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆಯ ಬಾಲಾಂಜನೇಯ ದೇವಾಲಯ ಸಮಿತಿ, ಸುಂಕದಕಟ್ಟೆಯ ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ, ಮಲೆತಿರಿಕೆ ಬೆಟ್ಟದ ಕಣ್ಮಣಿ ವಿನಾಯಕ ಸೇವಾ ಸಮಿತಿ, ಕೆ.ಬೋಯಿಕೇರಿ ವಿಘ್ನೇಶ್ವರ ಗಣಪತಿ ಸೇವಾ ಸಮಿತಿ, ಹರಿಕೇರಿ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಕುಕ್ಲೂರು ವಿಘ್ನೇಶ್ವರ ಉತ್ಸವ ಸಮಿತಿ ಪ್ರಮುಖವಾಗಿ ಪಾಲ್ಗೊಂಡಿದ್ದವು.
ಉತ್ಸವ ಸಮಿತಿಗಳ ಆಕರ್ಷಕ ವಿದ್ಯುತ್‌ಅಲಂಕೃತ ಮಂಟಪಗಳ ಶೋಭಾಯಾತ್ರೆ ಎಲ್ಲರ ಗಮನವನ್ನು ಸೆಳೆಯಿತು. ಮೊದಲಿಗೆ ನಗರದ ಹೃದಯ ಭಾಗದಲ್ಲಿರುವ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ರಾತ್ರಿ ಮಹಾಪೂಜೆ ಸಲ್ಲಿಸಿದ ಬಳಿಕ ಉತ್ಸವ ಮೂರ್ತಿಯನ್ನು ಹೂವಿನ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ತದನಂತರ ಇತರ ಉತ್ಸವ ಸಮಿತಿಗಳು ಮಹಾಪೂಜೆ ಸಲ್ಲಿಸಿ ಅಲಂಕೃತ ಮಂಟಪದಲ್ಲಿ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದವು. ನಗರದ ಮುಖ್ಯ ಬೀದಿಗಳಲ್ಲಿ ಗಣೇಶ ಮಂಟಪಗಳ ಶೋಭಾಯಾತ್ರೆ ಸಾಗಿತು. ವಿವಿಧ ಸಮಿತಿಗಳ ವತಿಯಿಂದ ಸಿಡಿಮದ್ದು ಪ್ರದರ್ಶನ ನಡೆಯಿತು.
ಶೋಭಾಯಾತ್ರೆಯಲ್ಲಿ ಕೊಡಗಿನ ಓಲಗ, ಪಂಚವಾದ್ಯ, ಪುತ್ತೂರುವಿನ ಕೀಲು ಗೊಂಬೆ, ಕೇರಳ ರಾಜ್ಯದ ಚಂಡೆ ಮದ್ದಳೆ, ಡೊಳ್ಳು ಕುಣಿತ ಮುಂತಾದ ಕಲಾ ತಂಡಗಳು ಮೆರುಗು ನೀಡಿದವು. ಮಂಟಪವನ್ನು ಹೂವು ಹಾಗೂ ವಿದ್ಯುತ್‌ನಿಂದ ಅಲಂಕಾರ ಮಾಡಲಾಗಿತ್ತು. ಜನರು ಹಾಡಿನ ಸದ್ದಿಗೆ ಹಾಗೂ ವಾಲಗಕ್ಕೆ ಕುಣಿದು ಕುಪ್ಪಳಿಸಿದರು. ಜಿಲ್ಲೆ ಹಾಗೂ ಇತರ ಜಿಲ್ಲೆಗಳಿಂದ ಆಗಮಿಸಿದ್ದ ಸಾರ್ವಜನಿಕರು ಶೋಭಯಾತ್ರೆಯನ್ನು ಕಣ್ತುಂಬಿಕೊಂಡು ಸಂಭ್ರಮ ಪಟ್ಟರು. ನಗರವನ್ನು ವಿದ್ಯುತ್‌ದೀಪಗಳಿಂದ ಸಂಪೂರ್ಣವಾಗಿ ಅಲಂಕರಿಸಲಾಗಿತ್ತು. ಶೋಭಯಾತ್ರೆ ಬಳಿಕ ಮುಂಜಾನೆಯಿಂದಲೇ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಐತಿಹಾಸಿಕ ಗೌರಿ ಕೆರೆಯಲ್ಲಿ ಉತ್ಸವ ಮೂರ್ತಿಗಳ ಸಾಮೂಹಿಕವಾಗಿ ವಿಸರ್ಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರು, ಉತ್ಸವ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು.
ರಸ್ತೆ ಬದಿ ವ್ಯಾಪಾರ ಜೋರು : ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಹಿನ್ನೆಲೆಯಲ್ಲಿ ನಗರದ ಮುಖ್ಯ ಬೀದಿಗಳಲ್ಲಿನ ರಸ್ತೆ ಬದಿಯಲ್ಲಿ ವ್ಯಾಪಾರಿಗಳು ಬಿರುಸಾಗಿಯೇ ವ್ಯಾಪಾರ ನಡೆಸಿದರು. ಜಿಲ್ಲೆಯ ವಿವಿಧೆಡೆ ಹಾಗೂ ಸಮೀಪದ ಜಿಲ್ಲೆಗಳಿಂದಲೂ ಆಗಮಿಸಿದ್ದ ಬೀದಿ ಬದಿ ವ್ಯಾಪಾರಿಗಳು ಮಂಗಳವಾರ ಮಧ್ಯಾಹ್ನದ ಬಳಿಕ ಮಳಿಗೆಗಳನ್ನು ತೆಗೆದು ವಿಸರ್ಜನಾ ಕಾರ್ಯ ನಡೆಯುವ ತನಕವೂ ಭರ್ಜರಿ ವ್ಯಾಪಾರ ಮಾಡಿದರು. ಪ್ರಮುಖವಾಗಿ ಮಕ್ಕಳ ಆಟಿಕೆಗಳು, ತಿಂಡಿ ಖಾದ್ಯಗಳು, ಹೂವು, ಬಟ್ಟೆ, ಗೃಹೋಪಯೋಗಿ ವಸ್ತುಗಳ ವ್ಯಾಪಾರ ಜೋರಾಗಿಯೇ ನಡೆಯಿತು.
ಬಿಗಿ ಪೊಲೀಸ್ ಬಂದೋಬಸ್ತ್: ಗಣೇಶ ಮೂರ್ತಿಗಳ ವಿಸರ್ಜನೋತ್ಸವದ ಪ್ರಯುಕ್ತ ನಗರದಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸ್ ಇಲಾಖೆಯು ಹದ್ದಿನ ಕಣ್ಣಿಟ್ಟಿತ್ತು. ಪೂರ್ವ ನಿಗದಿಯಂತೆ ನಗರದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಅದರಂತೆ ವಾಹನ ಸಂಚಾರದ ಮಾರ್ಗವನ್ನು ಬದಲಾಯಿಸಲಾಗಿತ್ತು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂದೋಬಸ್ತ್‌ನಲ್ಲಿ ತೊಡಗಿಕೊಂಡಿದ್ದರು. ಪೊಲೀಸ್ ಗಸ್ತು ವಾಹನವು ನಗರದಾದ್ಯಂತ ಸಂಚರಿತು.