

ಮುಧೋಳ: ಕವಿ ಚಕ್ರವರ್ತಿ ರನ್ನ ವೈಭವವು ರವಿವಾರ ಮುಧೋಳದಲ್ಲಿ ಅದ್ದೂರಿಯಾಗಿ ಆರಂಭವಾಯಿತು.
ಪಟ್ಟಣದ ಸಂಗೋಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಬೆಳಗ್ಗೆ ಮೆರವಣಿಗೆಗೆ ಗದೆಗಳನ್ನು ಪ್ರದರ್ಶನ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ನಗರದ ಪ್ರಮುಖ ರಸ್ತೆಗಳ ಮೂಲಕ ರನ್ನ ಕ್ರೀಡಾಂಗಣ ತಲುಪಿತು.
ಗ್ರಾಮೀಣ ಸೊಗಡಿನ ಜಾನಪದ ಕಲಾ ತಂಡಗಳ ಮೆರವಣಿಗೆ ಸಾಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಗಿ ಜಡಗಣ್ಣ ಬಾಲಣ್ಣ ವೃತ್ತದ ಮೂಲಕ ಸಾಗಿ ಕವಿ ಚಕ್ರವರ್ತಿ ರನ್ನ ಕ್ರೀಡಾಂಗಣದ ವೇದಿಕೆಯನ್ನು ತಲುಪಿತು. ನೂರಾರು ಮುತ್ತೈದೆಯರು ಕುಂಭ ಮತ್ತು ಆರತಿಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ರನ್ನ ರಥಗಳು, ಆನೆ, ಕುದುರೆಗಳು ಮೆರವಣಿಗೆಗೆ ಮೆರಗು ನೀಡಿದವು. ಹಲಗಿ ವಾದ್ಯ, ಕರಡಿ ಮಜಲು, ಡೊಳ್ಳು ಕುಣಿತ, ತಾಸೆ ವಾದನ, ಜಾನಪದ ಕೋಲಾಟ, ಶಹನಾಯಿ, ಕಣಿ, ಸಂಬಾಳ ವಾದನ, ಝಾಂಜ್ ಮೇಳ, ಕಲಾಟ ವಾದ್ಯ, ಪುರವಂತಿಕೆ, ಗೊಂಬೆಗಳ ಕುಣಿತ, ಲಂಬಾಣಿ ವೇಷ ಭೂಷಣ, ವೀರಗಾಸೆ, ದುರ್ಗಮರಗಿ, ಹನುಮಂತನ ಮತ್ತು ಹಕ್ಕಿ ಪಕ್ಷಿಗಳ ವೇಷಧಾರಿಗಳು ಮೆರವಣಿಗೆಯಲ್ಲಿ ಗಮನ ಸೆಳೆದರು. ಗದಾಯುದ್ಧ ಚಿತ್ರಗಳ ಗತವೈಭವ ಆಕರ್ಷಣಿಯವಾಗಿತ್ತು.
ಭವ್ಯ ಸ್ವಾಗತ: ಮೆರವಣಿಗೆಯುದ್ದಕ್ಕೂ ನೂರಾರು ಕಲಾವಿದರು ತಮ್ಮ ಕಲಾ ಪ್ರದರ್ಶನದಿಂದ ಸಾರ್ವಜನಿಕರನ್ನು ರಂಜಿಸಿದರು. ಮನೆ ಹಾಗೂ ಅಂಗಡಿ ಮುಗ್ಗಟ್ಟುಗಳ ಮುಂದೆ ನೀರು ಹಾಕಿ, ರಂಗೋಲಿ ಚಿತ್ತಾರ ಬಿಡಿಸಿ ಮೆರವಣಿಗೆಗೆ ಭವ್ಯ ಸ್ವಾಗತ ಕೋರಿದರು. ರಸ್ತೆಯುದ್ದಕ್ಕೂ ಜನರು ನಿಂತು ಮೆರವಣಿಗೆ ಕಣ್ತುಂಬಿಕೊಂಡರು. ಹೆದ್ದಾರಿಯಲ್ಲಿ ಬೀದಿದೀಪದ ಕಂಬಗಳಿಗೆ ಹಳದಿ ಕೆಂಪು ಬಟ್ಟೆಯಿಂದ ಅಲಂಕರಿಸಿ ಸ್ವಾಗತ ಕಮಾನು ನಿರ್ಮಿಸುವುದು ಗಮನ ಸೆಳೆಯುತ್ತಿದೆ.
ಆನೆ, ಕುದುರೆ ಮೆರವಣಿಗೆ: ಮೈಸೂರು ದಸರಾ ಮಾದರಿಯಲ್ಲಿ ಆನೆಯನ್ನು ಶೃಂಗಾರ ಮಾಡಿ ಆನೆಯ ಮೇಲಿನ ಅಂಭಾರಿಯಲ್ಲಿ ರನ್ನನ ಭಾವಚಿತ್ರ ಇಟ್ಟು ಜತೆಗೆ ಕುದುರೆಗಳನ್ನು ಗೃಂಗಾರ ಮಾಡಿ ಮೆರವಣಿಗೆ ಮಾಡಲಾಯಿತು. ಅಲ್ಲಲ್ಲಿ ರನ್ನನ ಅಭಿಮಾನಿಗಳು ಸಹ ಕುದುರೆಯ ಮೇಲೆ ಕುಳಿತು ಖುಷಿಪಟ್ಟರು.
ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ರನ್ನ ಪ್ರತಿಷ್ಠಾನದ ಸದಸ್ಯರು ಈ ವೈಭವವನ್ನು ಯಶಸ್ವಿಗೊಳಿಸಲು ಶ್ರಮಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ನಗರಸಭೆ ಅಧ್ಯಕ್ಷೆ ಸುನಂದ ಆತೇಲಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಎಸಿ ಶ್ವೇತಾ ಬೀಡಿಕರ, ಜಿಒಂ ಸಿಇಒ ಶಶಿಧರ ಕುರೇರ, ತಹಸೀಲ್ದಾರ್ ಮಹದೇವ ಸನಮುರಿ ಇದ್ದರು.