ರಾಜ್ಯೋತ್ಸವಕ್ಕೆ ಅದ್ದೂರಿ ಸಿದ್ಧತೆ

ಮದ್ದೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಡಾ.ಸ್ಮಿತಾರಾಮು ಮಾತನಾಡಿದರು. ಸೋಮಶೇಖರ್, ಸಿ.ಎಚ್.ಕಾಳೀರಯ್ಯ ಇತರರು ಇದ್ದರು.
ಮದ್ದೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಡಾ.ಸ್ಮಿತಾರಾಮು ಮಾತನಾಡಿದರು. ಸೋಮಶೇಖರ್, ಸಿ.ಎಚ್.ಕಾಳೀರಯ್ಯ ಇತರರು ಇದ್ದರು.
Published on

ಮದ್ದೂರು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನವೆಂಬರ್ 1 ರಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ಡಾ.ಸ್ಮಿತಾರಾಮು ತಿಳಿಸಿದರು.

ಕಾರ್ಯಕ್ರಮದ ವೇಳೆ ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನ.1ರಂದು ಬೆಳಗ್ಗೆ ಪಟ್ಟಣದ ಕೋಟೆ ಬೀದಿಯ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹಸ್ವಾಮಿ ದೇವಾಲಯ ಆವರಣದಿಂದ ಪೇಟೆ ಬೀದಿಯ ಮೂಲಕ ಭುವನೇಶ್ವರಿ ಅಲಂಕೃತ ಚಿತ್ರಪಟ ಮತ್ತು ಶಾಲಾ ಮಕ್ಕಳ ಪಥಸಂಚಲನದೊಡನೆ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಕಾರ್ಯಕ್ರಮದ ವೇಳೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಜಾನಪದ ಕಲಾ ಪ್ರಕಾರಗಳ ಪಾಲ್ಗೊಳ್ಳುವಿಕೆ, ಪೋಲೀಸ್ ಧ್ವಜವಂದನೆ ಮತ್ತಿತರ ವಿಷಯಗಳ ಕುರಿತಾಗಿ ಸಭೆ ವೇಳೆ ನಿರ್ಣಯ ಕೈಗೊಳ್ಳಲಾಯಿತು.

ಉಪಸಮಿತಿ: ರಾಷ್ಟ್ರೀಯ ಹಬ್ಬಗಳ ಆಚರಣೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಸಾಧಕರನ್ನು ಆಯ್ಕೆ ಮಾಡಿ ತಾಲೂಕು ಆಡಳಿತಕ್ಕೆ ವರದಿ ನೀಡುವ ಸಂಬಂಧ ಸಭೆ ವೇಳೆ ಉಪ ಸಮಿತಿ ರಚಿಸಿ ಅಧ್ಯಕ್ಷರಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸುನೀಲ್‌ಕುಮಾರ್(ಅಧ್ಯಕ್ಷ), ಸದಸ್ಯ ಕಾರ್ಯದರ್ಶಿಯಾಗಿ ಬಿಇಒ ಸಿ.ಎಚ್.ಕಾಳೀರಯ್ಯ, ಸದಸ್ಯರಾಗಿ ಚನ್ನಸಂದ್ರ ಲಕ್ಷ್ಮಣ್, ಬಸವಾಚಾರಿ ಮತ್ತು ಪ್ರಕಾಶ್ ಅವರನ್ನು ಆಯ್ಕೆಗೊಳಿಸಲಾಗಿದೆ.

ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ವಿಷಯ ನಿರ್ವಾಹಕ ನವೀನ್, ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆ ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಪುಟ್ಟಸ್ವಾಮಿ, ವಿವಿಧ ಸಂಘಟನೆಗಳ ಮುಖಂಡರಾದ ಮ.ನ.ಪ್ರಸನ್ನಕುಮಾರ್, ನ.ಲಿ.ಕೃಷ್ಣ, ಸಿ.ಎಂ.ಕ್ರಾಂತಿಸಿಂಹ, ವೆಂಕಟಾಚಲಯ್ಯ, ಶಿವರಾಜು, ರಾಮಣ್ಣ, ಕ್ರಾಂತಿಸಿಂಹ ಇತರರಿದ್ದರು.

1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net