ಮೈಸೂರಿನಲ್ಲಿ ಅದ್ದೂರಿ ಸಾಮೂಹಿಕ ಗಣೇಶ ಮೂರ್ತಿ ಮೆರವಣಿಗೆ

20
Published on

ಮೈಸೂರು: ಗೌರಿ-ಗಣೇಶ ಹಬ್ಬದ ಅಂಗವಾಗಿ ನಗರದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಅದ್ದೂರಿ ಸಾಮೂಹಿಕ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.
ನಗರದ ವಿವಿಧ ಬಡಾವಣೆಗಳಿಂದ ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಾಹನಗಳಲ್ಲಿ ಮೆರವಣಿಗೆ ನಡೆಸಿದ ಭಕ್ತರು, ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಮಾವೇಶ ನಡೆಸಿದರು. ಬಳಿಕ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಾಮೂಹಿಕ ವಿಸರ್ಜನೆ ಮಾಡಲಾಯಿತು. ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ವೃತ್ತಗಳಲ್ಲಿ ಭಾಗಧ್ವಜ ರಾರಾಜಿಸಿತು.
ಸಾವಿರಾರು ಜನರು ಈ ಸಂದರ್ಭ ಜಮಾವಣೆಗೊಂಡಿದ್ದರಿಂದ ಇಡೀ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಮೆರವಣಿಗೆಯಲ್ಲಿ ಬೃಹತ್ ಹಾಗೂ ಸುಂದರ, ವಿಭಿನ್ನ ಗಣೇಶ ಮೂರ್ತಿಗಳು ನೋಡುಗರ ಕಣ್ಮನ ಸೆಳೆದವು. ಅಲ್ಲದೆ ಗಾರುಡಿಗೊಂಬೆ, ಜಾನಪದ ಕಲಾ ತಂಡಗಳು ಗಮನ ಸೆಳೆದವು.
ನಗರದ ವೀರನಗೆರೆಯಿಂದ ಆರಂಭವಾದ ಭವ್ಯ ಮೆರವಣಿಗೆ ಅಶೋಕ ರಸ್ತೆ ಮೂಲಕ ಸಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ತಲುಪಿತು. ಮತ್ತೊಂದೆಡೆ ಜೆಎಲ್‌ಬಿ ರಸ್ತೆಯ ಮಾಧವಕೃಪಾ ಸೇರಿದಂತೆ ವಿವಿಧೆಡೆಯಿಂದಲೂ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಬಂದು ಸೇರಿದ ಎಲ್ಲ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮೆರವಣಿಗೆಯಲ್ಲಿ ನೂರಾರು ಗಣೇಶ ಮೂರ್ತಿಗಳೊಂದಿಗೆ ಸಾವಿರಾರು ಯುವಕರು ಭಾಗವಹಿಸಿದ್ದರು. ವೀರಗಾಸೆ, ನಾದಸ್ವರ, ತಮಟೆ, ಡೊಳ್ಳು ಸೇರಿದಂತೆ ವಿವಿಧ ಕಲಾ ತಂಡಗಳು ಮತ್ತು ಯುವಕರ ನೃತ್ಯ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ಬಳಿಕ ಮೆರವಣಿಗೆ ನಗರದ ಡಿ.ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಸಯ್ಯಜಿರಾವ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಮೂಲಕ ಶ್ರೀರಂಗಪಟ್ಟಣದತ್ತ ಸಾಗಿತು.
ಈ ವರ್ಷದ ಗಣೇಶ ಚತುರ್ಥಿಯ ಅಂಗವಾಗಿ ಸುಮಾರು ಐದು ದಿನಗಳ ಕಾಲ ಗೌರಿ-ಗಣೇಶನನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ, ಐದು ದಿನಗಳು ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಬುಧವಾರ ಪ್ರಮುಖ ರಸ್ತೆಗಳಾದ ಮಹಾತ್ಮ ಗಾಂಧಿ ರಸ್ತೆ, ರಾಮಸ್ವಾಮಿ ವೃತ್ತ, ಸಿದ್ದಪ್ಪ ವೃತ್ತ, ಅಗ್ರಹಾರ ಹಾಗೂ ಕೋಟೆ ಆಂಜನೇಯ ದೇವಸ್ಥಾನ ಆವರಣಗಳು ಕೇಸರಿ ಭಾಗವ ಧ್ವಜಗಳೊಂದಿಗೆ ಕಂಗೊಳಿಸುತ್ತಿದ್ದವು. ಬೃಹತ್ ಮೆರವಣಿಗೆಯುದ್ದಕ್ಕೂ ಗಣಪತಿ ಬಪ್ಪಾ ಮೋರಯ, ಮಂಗಳ ಮೂರ್ತಿ ಮೋರಯ ಎಂಬ ಘೋಷಣೆಗಳು ಮೊಳಗಿದವು.
ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಮುಖಂಡರಾದ ಜೋಗಿ ಮಂಜು, ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net