

ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ಐತಿಹಾಸಿಕ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕ್ಷೇತ್ರಪಾಲಕ ಶ್ರೀ ಆದಿರಂಗನಾಥನಿಗೆ ವಿಶೇಷ ಪೂಜೆ ಅರ್ಪಿಸಿ, ವಿಜೃಂಭಣೆಯ ಲಕ್ಷ ದೀಪೋತ್ಸವ ನಡೆಸಲಾಯಿತು.
ಸೋಮವಾರ ಮುಂಜಾನೆ 5 ಗಂಟೆಗೆ ಶ್ರೀ ಆದಿರಂಗನಾಥ ಸ್ವಾಮಿಗೆ ಪ್ರಥಮವಾಗಿ ಪ್ರಧಾನ ಅರ್ಚಕ ಪ್ರಸನ್ನ ಹಾಗೂ ವಿಜಯಸಾರಥಿ ಅವರ ನೇತೃತ್ವದಲ್ಲಿ ಸುಪ್ರಭಾತ ಸೇವೆ, ಬಳಿಕ 18 ಅಡಿ ಉದ್ದದ ಶೇಷಶಯನ ಮೂರ್ತಿ ಶ್ರೀಮನ್ ನಾರಾಯಣನಿಗೆ ಸಂಪೂರ್ಣ ಬೆಣ್ಣೆ ಅಲಂಕಾರ, ಸೇವಾಕಾಲ, ತಿರುಪಾವೈ, ಸ್ವಾಮಿಗೆ ನಿತ್ಯ ಸೇವೆಗಳ ಜತೆಗೆ ಸ್ತಪನ ಮೂರ್ತಿಗೆ ಸುಗಂಧ ದ್ರವ್ಯಗಳಾದ ಕೇಸರಿ, ಏಲಕ್ಕಿ, ಲವಂಗ, ಪಚ್ಚಕರ್ಪೂರ, ಗಂಧ, ಅಷ್ಟ ಗಂಧದ ಅಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ, ಆರಾಧನೆ, ನೈವೈದ್ಯ, ಹೋಮ, ಬಲಿಪ್ರಧಾನ, ಹೋಮಗಳ ಅರ್ಪಣೆ ಬಳಿಕ ಶಾತಮೊರೈ ಪೂಜೆ ನೆರವೇರಿಸಲಾಗಿದ್ದು, ದೇವಾಲಯಕ್ಕೆ ಆಗಮಿಸುತ್ತಿದ್ದ ಸಹಸ್ರಾರಾರು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ವರ್ಷಕ್ಕೊಮ್ಮೆ ವಿಶೇಷ ವೈಕುಂಠದ್ವಾರ ಮುಕ್ತ: ಸಂಜೆ ಶ್ರೀ ಮಹಾವಿಷ್ಣು ಸ್ವರೂಪಿಗೆ ವಿಶೇಷ ನೈವೇದ್ಯ, ಆರಾಧನೆ, ಹೋಮ, ಬಲಿಪ್ರಧಾನ ಅರ್ಪಣೆ ಬಳಿಕ ದೇವಾಲಯದ ವೈದಿಕರು ಸಂಪೂರ್ಣ ಆಡಳಿತದ ಸಮ್ಮುಖದಲ್ಲಿ ಶ್ರೀದೇವಿ, ಭೂದೇವಿ ಸಮೇತವಿರುವ ಶ್ರೀರಂಗನಾಥಸ್ವಾಮಿಗೆ ವೈಕುಂಠ ಮುಡಿಧಾರಣೆ ನಡೆಸಿ ಸ್ವಾಮಿಯ ಸಮ್ಮುಖದಲ್ಲಿ ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುವ ವೈಕುಂಠ ದ್ವಾರವನ್ನು ಗೋಧೂಳಿ ಸಮಯದ 6 ಗಂಟೆಗೆ ತೆರದು ಸಂಪ್ರದಾಯ ಪೂಜೆಗಳನ್ನು ನೇರವೇರಿಸಿದರು. ನಂತರ ಶ್ರೀರಂಗನಾಯಕಿ ಸಮೇತವಿರುವ ಸ್ವಾಮಿಯ ಪಂಚಲೋಹದ ವಿಶೇಷ ಉತ್ಸವಮೂರ್ತಿಯ ಪಲ್ಲಕ್ಕಿಯನ್ನು ಹೊತ್ತು ಸ್ವರ್ಗದ ಬಾಗಿಲು ಸುತ್ತ ಪ್ರದಕ್ಷಿಣೆ ನಡೆಸಿ ಅಂತಿಮವಾಗಿ ಮೂಲದೇವರು ಇರುವ ಸ್ವರ್ಗದ ಬಾಗಿಲನ್ನು ತೆರದು ಪುಣ್ಯ ಪ್ರಾಪ್ತಿಗಾಗಿ ಭಕ್ತರ ಒಳಪ್ರವೇಶಕ್ಕೆ ಅನುಮತಿ ನೀಡಲಾಯಿತು.
ಮುಂಜಾನೆಯಿಂದ ಶ್ರೀರಂಗಪಟ್ಟಣ ಹಾಗೂ ಕ್ಷೇತ್ರದ ಸುತ್ತಮುತ್ತಲ ಗ್ರಾಮೀಣ ಜನರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ಲಕ್ಷಾಂತರ ಭಕ್ತರು ಮತ್ತು ಜನರು ಪಟ್ಟಣಕ್ಕೆ ಕುಟುಂಬ ಸಮೇತ ಆಗಮಿಸಿ ಜೀವನದಿ ಕಾವೇರಿಯಲ್ಲಿ ಮಿಂದು ಶ್ರೀ ಆದಿರಂಗನ ದರ್ಶನ ಪಡೆದು ವೈಕುಂಠ ದ್ವಾರ ಪ್ರವೇಶದೊಂದಿಗೆ ಗೋವಿಂದ, ನಾರಾಯಣ, ಮಹಾವಿಷ್ಣು, ಶ್ರೀಹರಿ, ಶ್ರೀ ಆದಿರಂಗನಾಥನೆಂದು ದೇವರ ನಾಮಸ್ಮರಣೆಯೊಂದಿಗೆ ಪ್ರಾರ್ಥಿಸಿ ಪುನೀತರಾದರು.
34ನೇ ವರ್ಷದ ಲಕ್ಷದೀಪೋತ್ಸವಕ್ಕೆ ಚಾಲನೆ: ಪ್ರತಿ ವರ್ಷದಂತೆ ಮಕರ ಸಂಕ್ರಾಂತಿ ದಿನದಂದು ಕ್ಷೇತ್ರಪಾಲಕ ಶ್ರೀ ಆದಿರಂಗನ ಸನ್ನಿಧಿಯಲ್ಲಿ ನಡೆಸಲಾಗುವ ಲಕ್ಷದೀಪೋತ್ಸವವನ್ನು ಸಹಸ್ರಾರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಶ್ರೀ ಆದಿರಂಗನಾಥಸ್ವಾಮಿ ದೇವಾಲಯ ಮುಂಭಾಗದಲ್ಲಿ ಈ ಬಾರಿ 34ನೇ ವರ್ಷದ ಲಕ್ಷ ದೀಪೋತ್ಸವ ಜರುಗಿದ್ದು, ಸೋಮವಾರ ಸಂಜೆ 5 ಗಂಟೆಗೆ ಪ್ರಥಮವಾಗಿ ಖ್ಯಾತ ಜ್ಯೋತಿಷಿ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ ಹಾಗೂ ಶ್ರೀ ರಂಗನಾಥಸ್ವಾಮಿ ದೇಗುಲದ ಅರ್ಚಕರ ನೇತೃತ್ವದಲ್ಲಿ ಲಕ್ಷದೀಪೋತ್ಸವ ಸಮಿತಿ ಮುಖ್ಯಸ್ಥರಾದ ವಿಷ್ಣುಮೂರ್ತಿ, ವೇದಬ್ರಹ್ಮ ಲಕ್ಷ್ಮೀಶ ಶರ್ಮ ಹಾಗೂ ವೆಂಕಟೇಶ್ ಕಾಮತ್ ಸಮ್ಮುಖದಲ್ಲಿ ವೈದಿಕರಿಂದ ವಿಶೇಷ ಪೂಜಾ ವಿಧಿನಾಗಳು ನಡೆದವು. ಬಳಿಕ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹಾಗೂ ಜ್ಯೋತಿಷಿ ಭಾನುಪ್ರಕಾಶ್ ಅವರು ಮುಖ್ಯ ಅತಿಥಿಗಳೊಂದಿಗೆ ಸಂಜೆ 6.30ರ ಗೋಧೂಳಿ ಲಗ್ನದಲ್ಲಿ ಜ್ಯೋತಿ ಬೆಳಗಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಗಮನ ಸೆಳೆದ ಹಣತೆ ಅಲಂಕಾರ: ಶ್ರೀ ರಂಗನಾಥಸ್ವಾಮಿ ದೇವಾಲಯ ಮುಂಭಾಗ ಅಂಗಳದಲ್ಲಿ ಈ ಬಾರಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರ ಉದ್ಘಾಟನೆ ಪ್ರಯುಕ್ತ ರಾಮಮಂದಿರದ ಆಕೃತಿಯನ್ನು ಸಾವಿರಾರು ಮಣ್ಣಿನ ಹಣತೆಗಳಲ್ಲಿ ಕಲಾವಿದ ಸಂದೇಶ್ ರಚಿಸಿದ್ದು, ಇದರೊಂದಿಗೆ ಗಂಡಭೇರುಂಡ ವೃತ್ತದಲ್ಲಿ ಶ್ರೀಚಕ್ರ ಸಹಿತ ನವಜ್ಯೋತಿ ದೀಪಗಳನ್ನು ಬೃಹತ್ ವೃತ್ತದಲ್ಲಿ ವರ್ಣರಂಜಿತವಾಗಿ ಮಣ್ಣಿನ ಹಣತೆಗಳಿಂದ ಅಲಂಕರಿಸಲಾಗಿತ್ತು. ಜತೆಗೆ, ದೇವಾಲಯ ಮುಂದಿನ 300 ಮೀಟರ್ ದೂರದ ರಸ್ತೆಯುದ್ದಕ್ಕೂ ಗಂಡಭೇರುಂಡ ವೃತ್ತದ ವರೆಗೆ ಎರಡು ಇಕ್ಕೆಲಗಳಲ್ಲಿ ಇಡಲು ಬಿದಿರನ ದಬ್ಬೆಗಳ ಸಹಾಯದಿಂದ ಅಟ್ಟಣೆಗಳನ್ನು ಕಟ್ಟಿ ಅಳವಡಿಸಲಾದ ಅಡಕೆ ಪಟ್ಟಿಯ ಕಂಬಗಳಲ್ಲಿ 4 ಅಡ್ಡ ಸಾಲುಗಳಂತೆ ಒಟ್ಟು 8 ಸಾಲುಗಳು ಹಾಗೂ ನೆಲದ ಮೇಲಿನ 10 ಸಾಲುಗಳಲ್ಲಿ ಸಾವಿರಾರು ಲೀ. ಎಣ್ಣೆ ಮತ್ತು ಲಕ್ಷಾಂತರ ಬತ್ತಿಗಳೊಂದಿಗೆ ಸಿದ್ಧಪಡಿಸಿ ಗೋವಿನ ಸಗಣಿಯಲ್ಲಿ ಸಾಲಾಗಿ ಇಡಲಾಗಿದ್ದ ಲಕ್ಷಾಂತರ ಸಾಲು ದೀಪಗಳಿಗೆ ಜ್ಯೋತಿ ಮೂಲಕ ಬೆಳಗಿಸಲಾಯಿತು.
ಇದರೊಂದಿಗೆ ಶ್ರೀರಂಗನಾಥಸ್ವಾಮಿ ದೇವಾಲಯದ ರಾಜಗೋಪುರ, ಮುಂಭಾಗದ ಗಂಡಭೇರುಂಡ ಸೇರಿದಂತೆ ವಿವಿಧ ವೃತ್ತಗಳಲ್ಲಿ ಗಣಪತಿ, ವೆಂಕಟೇಶ್ವರ , ಪದ್ಮಾವತಿ, ಹನುಮಂತನ ದೇವರ ಬೃಹತ್ ವಿದ್ಯುತ್ ಕಟೌಟ್‌ಗಳ ಜತೆಗೆ ಪಟ್ಟಣದ ರಾಜಬೀದಿಗಳನ್ನು ವಿದ್ಯುತ್ ದೀಪಾಲಂಕಾರಗಳಿಂದ ಜಗಮಗ ಬೆಳಗಿಸಲಾಯಿತು. ಇದರೊಂದಿಗೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲೂ ವಿಶೇಷವಾಗಿ ಸಾವಿರಾರು ದೀಪಗಳನ್ನು ಬೆಳೆಗಲಾಯಿತು.
ಈ ಸಾಲು ದೀಪಗಳಿಗೆ ಎಣ್ಣೆ ಹಾಕಿ, ಜ್ಯೋತಿ ಹೊತ್ತಿಸಿ ಬೆಳಗಿಸುವ ಪ್ರಕ್ರಿಯೆನ್ನು ಲಕ್ಷ ದೀಪೋತ್ಸವ ಸಮಿತಿ, ಅಭಿನವ ಭಾರತ್, ವಿದ್ಯಾಭಾರತಿ ಹಾಗೂ ಪಟ್ಟಣದ ಒಟ್ಟು 100 ಕ್ಕೂ ಹೆಚ್ಚು ಸ್ವಯಂ ಸೇವಕರ ತಂಡ ನಿರ್ವಹಿಸಿತು.