

ಬೀರೂರು: ಪುರಸಭೆ ಸಭಾಂಗಣದಲ್ಲಿ 78ನೇ ಸ್ವಾತಂತ್ರೃದಿನಾಚರಣೆ ಆಚರಣೆ ಕುರಿತು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಮೋಹನ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ತಾಲೂಕು ದೈಹಿಕ ಶಿಕ್ಷಣ ಸಂಯೋಜಕ ಜಯದೇವಪ್ಪ ಮಾತನಾಡಿ, 78ನೇ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಅದ್ದೂರಿಯಾಗಿ ಆಚರಿಸಬೇಕು. ಕಾರ್ಯಕ್ರಮದಲ್ಲಿ ಎಲ್ಲ ಪ್ರಾಥಮಿಕ, ಪ್ರೌಢಶಾಲೆ ಮಕ್ಕಳನ್ನು ಬಿ.ಹೆಚ್.ರಸ್ತೆಯ ಕೆಎಲ್‌ಕೆ ಪ್ರೌಢಶಾಲೆ ಮೈದಾನಕ್ಕೆ ನಿಗದಿತ ಸಮಯಕ್ಕೆ ಶಾಲೆ ಮುಖ್ಯಶಿಕ್ಷಕರು ಕರೆತರಬೇಕು. ಮಕ್ಕಳಿಂದ ಧ್ವಜವಂದನೆ, ಪಥ ಸಂಚಲನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಭೆಗೆ ಕೆಲವು ಖಾಸಗಿ ಶಾಲೆಗಳು ಗೈರಾಗಿವೆ. ರಾಷ್ಟ್ರೀಯ ಹಬ್ಬದ ಸಿದ್ದತಾ ಪೂರ್ವ ಸಭೆಗಳಿಗೆ ಆಗಮಿಸದಿರುವುದು ಪುರಸಭೆಗೆ ತೋರಿದ ಅಗೌರವ. ತಕ್ಷಣ ಅವರ ಮೇಲೆ ಕ್ರಮ ಜರುಗಿಸಬೇಕು. ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶಾಲೆಗಳಿಗೆ ಸಿಹಿ ವಿತರಣೆಗೆ ಕ್ರಮವಹಿಸಬೇಕು ಎಂದರು.
ಪುರಸಭೆ ಮುಂಭಾಗದಲ್ಲಿ ಧ್ವಜಾರೋಹಣ, ಗಾಂಧೀಜಿ ಮತ್ತು ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ನೆರವೇರಿಸಿ ನಂತರ ಕೆಎಲ್‌ಕೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮೀಮೋಹನ್ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಆರೋಗ್ಯ ನಿರೀಕ್ಷಕ ಲಕ್ಷ್ಮಣ್ ಮಾಹಿತಿ ನೀಡಿದರು
ವಿವಿಧ ಶಾಲಾ ಮುಖ್ಯಶಿಕ್ಷಕರು, ಪೊಲೀಸ್ ಇಲಾಖೆ, ಸಂಘ ಸಂಸ್ಥೆಗಳು ಭಾಗವಹಿಸಿದ್ದರು. ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಮುಖ್ಯಾಧಿಕಾರಿ ಜಿ.ಪ್ರಕಾಶ್, ಸದಸ್ಯರಾದ ಬಿ.ಆರ್.ಮೋಹನ್ ಕುಮಾರ್, ನಾಮಿನಿ ಸದಸ್ಯ ಉಮೇಶ್, ಮುಬಾರಕ್, ಎಎಸ್‌ಐ ನಾಗೇಗೌಡ ಇದ್ದರು.