

ಹುಬ್ಬಳ್ಳಿ : ಇಲ್ಲಿನ ರಾಣಿ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ರಾಣಿ ಚನ್ಮಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ವತಿಯಿಂದ ಮೂರು ದಿನಗಳ ಕಾಲ ಪ್ರತಿಷ್ಠಾಪಿಸಿದ್ದ ಶ್ರೀ ಕೃಷ್ಣ ರೂಪಿ ಗಣೇಶ ಮೂರ್ತಿಯನ್ನು ಶುಕ್ರವಾರ ಅದ್ದೂರಿ ಮೆರವಣಿಗೆಯೊಂದಿಗೆ ಹೊಸೂರಿನ ಬಾವಿಯಲ್ಲಿ ವಿಸರ್ಜಿಸಲಾಯಿತು.
ಈ ಸಂದರ್ಭದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಂಸದ ಪ್ರತಾಪ ಸಿಂಹ, ಕಾಶ್ಮೀರದ ಲಾಲ್ಚೌಕ್ ಹಾಗೂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ನಡೆದ ಹೋರಾಟದ ದಿನಗಳನ್ನು ಮೆಲುಕು ಹಾಕಿದರು.
ಗಣೇಶೋತ್ಸವ ಕೇವಲ ಮನೆಗಳ ದೇವರ ಕೋಣೆಗೆ ಸೀಮಿತವಾಗಿತ್ತು. ಸ್ವಾತಂತ್ರ್ಯ್ಕಾಗಿ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಬಾಲ ಗಂಗಾಧರ ತಿಲಕ ಅವರು ಸಾರ್ವಜನಿಕ ಗಣೇಶೋತ್ಸವದ ಸಂಪ್ರದಾಯ ಆರಂಭಿಸಿದರು. ಈಗ ಸಾರ್ವಜನಿಕ ಗಣೇಶೋತ್ಸವದ ಮೂಲಕ ಹಿಂದುಗಳೆಲ್ಲ ಒಗ್ಗಟ್ಟಾಗಬೇಕಿದೆ. ನಮ್ಮಲ್ಲಿನ ಭಿನ್ನತೆ ತೊರೆಯಬೇಕಿದೆ ಎಂದು ಹೇಳಿದರು.
ಮಧ್ಯಾಹ್ನ 2 ಗಂಟೆಗೆ ಪ್ರಾರಂಭಗೊಂಡ ಶ್ರೀ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಡೊಳ್ಳು, ಚಂಡೆ, ಶಹನಾಯಿ, ತಮಟೆ, ಕೋಲಾಟ, ಡೋಲ್ ತಾಷಾ, ಜಗ್ಗಲಗಿ, ಲೇಜಿಮ್ ಝಾಂಜ್, ಕಂಸಾಳೆ ಸೇರಿದಂತೆ 18 ವಾದ್ಯಮೇಳ ಹಾಗೂ ವಿವಿಧ ತಂಡಗಳು ಸಂಭ್ರಮ ಹೆಚ್ಚಿಸಿದ್ದವು. ಶ್ರೀ ರಾಮ ಹಾಗೂ ಶ್ರೀ ಹನುಮಾನ ಮೂರ್ತಿಗಳು ಮೆರವಣಿಗೆಗೆ ಮೆರುಗು ನೀಡಿದವು.
ಚನ್ನಮ್ಮ ಸರ್ಕಲ್, ನೀಲಿಜಿನ್ ರಸ್ತೆ, ಹೊಸೂರ ಸರ್ಕಲ್ ಮಾರ್ಗವಾಗಿ ಹೊಸೂರ ಬಾವಿಯವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ಮೆರವಣಿಗೆ ಉದ್ದಕ್ಕೂ ತ್ವರಿತ ಕಾರ್ಯಾಚರಣೆ ಪಡೆ ಹಾಗೂ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.
ಪ್ರಯಾಣಿಕರ ಪರದಾಟ: ಅಂದಾಜು ಐದಾರು ತಾಸು ನಡೆದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಪ್ರಯಾಣಿಕರು, ವಾಹನ ಸವಾರರು ಪರದಾಡಿದರು.
ಶಾಸಕ ಮಹೇಶ ಟೆಂಗಿನಕಾಯಿ, ಮಹಾಮಂಡಳಿ ಅಧ್ಯಕ್ಷ ಸಂಜೀವ ಬಡಸ್ಕರ, ಸ್ವಾಗತ ಸಮಿತಿ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ, ಮಹಾಪೌರ ಜ್ಯೋತಿ ಪಾಟೀಲ, ಉಪ ಮಹಾಪೌರ ಸಂತೋಷ ಚವ್ಹಾಣ, ಉದ್ಯಮಿ ಮಹಾದೇವ ಕರಮರಿ, ರಘು ಯಲ್ಲಕ್ಕನವರ, ವಿನಾಯಕ ತಲಗೇರಿ, ಜಯತೀರ್ಥ ಕಟ್ಟಿ ಹಾಗೂ ಇತರರು ವೇದಿಕೆಯಲ್ಲಿ ಇದ್ದರು.
ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ಬೀರಪ್ಪ ಖಂಡೇಕರ, ಮೀನಾಕ್ಷಿ ವಂಟಮುರಿ, ಬಿಜೆಪಿ ಈಶ್ವರಗೌಡ ಪಾಟೀಲ, ಸಿದ್ದು ಮೊಗಲಿಶೆಟ್ಟರ, ರವಿ ನಾಯಕ, ಲಕ್ಷ್ಮ್ಮ ಗಂಡಗಾಳೇಕರ, ಮಹೇಂದ್ರ ಕೌತಾಳ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.