

ಮದ್ದೂರು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶ್ರೀರಾಮನ ದೇವಾಲಯಗಳಲ್ಲಿ ಸಡಗರ ಸಂಭ್ರಮದಿಂದ ಶ್ರೀರಾಮನವಮಿಯನ್ನು ಬುಧವಾರ ಆಚರಿಸಲಾಯಿತು.
ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯಲ್ಲಿ ಶ್ರೀರಾಮನವಮಿ ಅಂಗವಾಗಿ ದೇವರಿಗೆ ಮಧು ಅಭಿಷೇಕ, ಪಂಚಾಮೃತ ಅಭಿಷೇಕ, ಅರಿಶಿಣ, ಹೂವಿನ ಅಲಂಕಾರ ನಂತರ ಸೀತಾ, ರಾಮ, ಹನುಮ ಹಾಗೂ ಲಕ್ಷ್ಮಣ ಸಮೇತ ಅದ್ದೂರಿ ರಥೋತ್ಸವ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ರಥ ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಭಕ್ತರಿಗೆ ತೀರ್ಥ, ಪ್ರಸಾದ, ಮಜ್ಜಿಗೆ, ಪಾನಕ ಹಾಗೂ ಕೋಸಂಬರಿಯನ್ನು ವಿತರಿಸಲಾಯಿತು.
ಶಾಸಕ ಕೆ.ಎಂ.ಉದಯ್, ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ರಾಮನವಮಿ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಭಕ್ತಗರಿಗೆ ತೀರ್ಥ ಪ್ರಸಾದ, ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.
ಬೀದಿಬದಿ ವ್ಯಾಪಾರಿಗಳಿಂದ ಶ್ರೀರಾಮನವಮಿ ಆಚರಣೆ: ಪಟ್ಟಣದ ಪೇಟೆಬೀದಿಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಶ್ರೀರಾಮನವಮಿ ಅಂಗವಾಗಿ ಬೀದಿಬದಿ ವ್ಯಾಪಾರಿಗಳ ಸಂಘದ ವತಿಯಿಂದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಪುಳಿಯೋಗರೆ, ಮೊಸರನ್ನ, ಮಜ್ಜಿಗೆ ಹಾಗೂ ಪಾನಕ ವಿತರಣೆ ಮಾಡಿದರು. ವ್ಯಾಪಾರಿಗಳಾದ ಪಾನಿಪುರಿ ಗುರುರಾಜ್, ಗೋಬಿ ಸತೀಶ್, ಸುರೇಶ್, ಸೋಮಶೇಖರ್, ಶ್ರೀನಿವಾಸ್, ಚಿಕ್ಕಮ್ಮ ಸೇರಿದಂತೆ ಇತರರು ಇದ್ದರು. ಪಟ್ಟಣದ ಸೇರಿದಂತೆ ತಾಲೂಕಿನ ಶ್ರೀ ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಂಡು ಭಕ್ತಾದಿಗಳಿಗೆ ತೀರ್ಥ, ಪ್ರಸಾದ, ಹೆಸರುಬೇಳೆ, ಪಾನಕ ಹಾಗೂ ಮಜ್ಜಿಗೆ ವಿತರಿಸಿ ಭಕ್ತಿ ಭಾವ ಮೆರೆದರು.