

ಕಂಪಲಾಪುರ: ಇಲ್ಲಿನ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನದ 17ನೇ ವರ್ಷದ ಪೂಜಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು
ಕೆ.ಆರ್.ನಗರದ ಗಣೇಶ್ ತಂಡದಿಂದ ಶನಿವಾರದಿಂದಲೇ ಪೂಜಾವಿಧಿ ವಿಧಾನಗಳು ನಡೆದವು.
ಭಾನುವಾರ ಬೆಳಗ್ಗೆ ಹೋಮ ಹವನಾದಿ ನಂತರ ಮಹಾಮಂಗಳಾರತಿ ನೆರವೇರಿತು. ಶ್ರೀ ನಾಗಾ ವಿದ್ಯಾಸಂಸ್ಥೆ ಆವರಣದಲ್ಲಿ ಅನ್ನಸಂತರ್ಪಣೆ ನಡೆಯಿತು.
ದೇವಾಂಗ ಸಮುದಾಯದ ಪುಟ್ಟ ಮಕ್ಕಳು, ಯುವ ಜನತೆ ಹಾಗೂ ಹಿರಿಯರೆಲ್ಲರೂ ಶ್ವೇತವಸ್ತ್ರದಲ್ಲಿ ಪಾಲ್ಗೊಂಡಿದ್ದರು.
ಸಂಜೆ 6 ಗಂಟೆಯಿಂದ ದೇವಿಯ ಮೆರವಣಿಗೆ, ಮಡಿಕೇರಿಯ ನಜೀರ್ ಮಾಲಿಕತ್ವದ ವಿದ್ಯುತ್ ದೀಪಲಂಕಾರದ ಭವ್ಯ ಮಂಟಪದಲ್ಲಿ ದೇವಿಯನ್ನ ಕೂರಿಸಿ ಮೆರವಣಿಗೆ ನಡೆಸಲಾಯಿತು.
ಕಂಪಲಾಪುರದ ಚೇತನ್ ತಂಡದಿಂದ ಮಂಗಳವಾದ್ಯ, ಕೇರಳದ ಶೋಭಿತ್ ಮೋಹನ್ ತಂಡದ ಚಂಡೆನಾದಕ್ಕೆ ಹೆಂಗಳೆಯರು ಸೇರಿದಂತೆ ಯುವಕರೆಲ್ಲ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಲಂಕಾರ ಮಾಡಲಾಗಿತ್ತು. ಇದು ನೆರೆದಿದ್ದವರ ಕಣ್ಮನ ಸೆಳೆಯಿತು. ಸಚಿವ ಕೆ.ವೆಂಕಟೇಶ್ ವಾರ್ಷಿಕೋತ್ಸವಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.