

ಸರಗೂರು: ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀ ಮಹದೇಶ್ವರಸ್ವಾಮಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ಹೊರವಲಯದಿಂದ ದೇವರ ಕಳಸವನ್ನು ಸತ್ತಿಗೆ ಸೂರಿಪಾನಿಗಳು, ಮಂಗಳವಾದ್ಯ ಸೇರಿದಂತೆ ಡಾ.ನೀಲಕಂಠ ತಂಡದಿಂದ ವೀರಗಾಸೆ ನೃತ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ದೇವಸ್ಥಾನದ ಬಳಿಗೆ ತರಲಾಯಿತು.
ಬಳಿಕ ಸತ್ತಿಗೆ ಹೊತ್ತ ಭಕ್ತರು, ದೇವರ ಗುಡ್ಡಪ್ಪ ಸೇರಿದಂತೆ ಗ್ರಾಮಸ್ಥರು ಕೆಂಡವನ್ನು ಹಾಯ್ದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ಕೊಂಡೋತ್ಸವ ಕಣ್ತುಂಬಿಕೊಂಡರು. ಬಳಿಕ ಭಕ್ತರು ಕೊಂಡಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನಂತರ ದೇವರ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನವನ್ನು ವಿವಿಧ ಬಗೆಯ ಹೂ, ಮಾವಿನ ತೋರಣಗಳಿಂದ ಸಿಂಗರಿಸಲಾಗಿತ್ತು. ಅಲ್ಲದೆ ಗ್ರಾಮದ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.