12ರಂದು ಅದ್ದೂರಿ ಬುದ್ಧ ಜಯಂತ್ಯುತ್ಸವ

8blrp2
ಬುದ್ಧ ಜಯಂತಿ ಅಂಗವಾಗಿ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್, ರಾಜು, ಎಂ.ಮಮತಾ , ವಸಂತಕುಮಾರ್, ಅನ್ವರ್ ಭಾಷಾ ಇತರರಿದ್ದರು.
Published on

ಬೇಲೂರು: ಬೇಲೂರಿನಲ್ಲಿ ಗೌತಮ ಬುದ್ಧ ಹಾಗೂ ಡಾ.ಅಂಬೇಡ್ಕರ್ ಅನುಯಾಯಿಗಳು ಹೆಚ್ಚಾಗಿ ಇರುವುದರಿಂದ ಮೇ 12ರಂದು ಬುದ್ಧ ಜಯಂತಿಯನ್ನು ಎಲ್ಲರ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಸರ್ಕಾರದ ಮೇ 12ರಂದು ಬುದ್ಧ ಜಯಂತಿ ಆಚರಿಸಲು ಆದೇಶಿಸಿರುವ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಗುರುವಾರ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದ ಆದೇಶದಂತೆ ಬುದ್ಧ ಜಯಂತಿಯನ್ನು ಸಮಾಜದ ಬಾಂಧವರು, ತಾಲೂಕು ಆಡಳಿತದವರು ಸೇರಿ ಆಚರಿಸೋಣ. ಈ ಕಾರ್ಯಕ್ರಮಕ್ಕೆ ಎಲ್ಲರ ಸಹಭಾಗಿತ್ವ ಅವಶ್ಯಕವಾಗಿದ್ದು, ಸ್ವಯಂ ಪ್ರೇರಿತರಾಗಿ ತಾಲೂಕಿನ ಎಲ್ಲ ಗ್ರಾಮಗಳಿಂದಲೂ ಬುದ್ಧ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಗಾಂಧಾರ ಬುದ್ಧ ವಿಹಾರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಾಜು ಮಾತನಾಡಿ, 2019ರಲ್ಲಿ ಬುದ್ಧ ಜಯಂತಿಯಂದು ಬುದ್ಧರ 12 ಅಡಿ ಎತ್ತರದ ಪ್ರತಿಮೆಯನ್ನು ಬೇಲೂರು ಪಟ್ಟಣದ ಮುಖ್ಯರಸ್ತೆ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ದು ಜಯಂತಿ ಆಚರಿಸಿದ್ದೆವು. ಅದೇ ರೀತಿ ಈ ಬಾರಿ ತಾಲೂಕು ಆಡಳಿತದೊಂದಿಗೆ ಸೇರಿ ಮೇ 12 ರಂದು ಅದ್ದೂರಿಯಾಗಿ ಜಯಂತಿಯನ್ನು ಆಚರಿಸುವ ಮೂಲಕ ಬುದ್ಧರ ಸಂದೇಶವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸಾಧ್ಯವಾದರೆ ಅಂಗನವಾಡಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ತಾಪಂಗೆ ಸೇರಿದ ಸ್ವಸಹಾಯ ಸಂಘಗಳ ಸದಸ್ಯರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ತಿಳಿಸಿದರೆ ಒಳಿತು. ಜತೆಗೆ ಸಮುದಾಯದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಸರ್ಕಾರದ ಆದೇಶದಂತೆ ಶಾಸಕರ ಅಧ್ಯಕ್ಷತೆಯಲ್ಲಿ ಬುದ್ಧ ಜಯಂತಿ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು. ಈ ಕಾರ್ಯಕ್ರಮಕ್ಕೆ ಎಲ್ಲ ಸಂಘ ಸಂಸ್ಥೆ, ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಲು ಆಹ್ವಾನಿಸುತ್ತಿದ್ದೇನೆ ಎಂದರು.

ತಾಪಂ ಇಒ ವಸಂತಕುಮಾರ್, ಜಿಪಂ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ ಅನ್ವರ್ ಭಾಷಾ, ಮುಖಂಡರಾದ ಪರ್ವತಯ್ಯ, ಮಂಜುನಾಥ್, ಲಕ್ಷ್ಮಣ್, ಬಳ್ಳೂರು ಉಮೇಶ್, ಡಾ.ರಮೇಶ್, ವಿರೂಪಾಕ್ಷ, ಗಂಗಾಧರ್, ಚಂದ್ರು, ನಿಂಗರಾಜು, ಅಶೋಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net