

ತಿ.ನರಸೀಪುರ: ತಾಲೂಕಿನ ಕುರುಬೂರು ಗ್ರಾಮದಲ್ಲಿ ಸೋಮವಾರ ಬಸವ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಕಾಯಕ ಮತ್ತು ದಾಸೋಹದ ಮಹತ್ವ ತಿಳಿಸಿದ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಗ್ರಾಮದ ಪಟ್ಟದ ಮಠದಲ್ಲಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಲಾಯಿತು. ಬಸವ ಜಯಂತಿ ಮಹೋತ್ಸವದ ಪ್ರಯುಕ್ತ ಮಧ್ಯಾಹ್ನ ದಾಸೋಹ ಏರ್ಪಡಿಸಲಾಗಿತ್ತು.
ಸಂಜೆ ವೇಳೆಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಅಲಂಕರಿಸಿದ ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಿ ನಂದಿಕಂಬ, ಮಂಗಳವಾದ್ಯ, ವೀರಗಾಸೆ, ಎತ್ತುಗಳ ಸಮೇತ ಪುಷ್ಪ ಮತ್ತು ದೀಪಾಲಂಕೃತದೊಂದಿಗೆ ಮೆರವಣಿಗೆ ಮಾಡಲಾಯಿತು. ಪ್ರಮುಖ ರಸ್ತೆಗಳಲ್ಲಿ ಸಾಗಿದ ಬಸವೇಶ್ವರರ ದಿಬ್ಬಣಕ್ಕೆ ಗ್ರಾಮಸ್ಥರು ಪೂಜಿ ಸಲ್ಲಿಸಿದರು.
ಪಟ್ಟದ ಮಠದ ಮಲ್ಲಿನಾಥ ಶಿವಾಚಾರ್ಯ ಸ್ವಾಮೀಜಿ, ಕೊತ್ತೆಗಾಲ ಮಠದ ನಾಗಪ್ಪ ಸ್ವಾಮೀಜಿ, ಯುವಕರು ಹಾಗೂ ಗ್ರಾಮಸ್ಥರು ಇದ್ದರು.