ಹುಬ್ಬಳ್ಳಿಯಲ್ಲಿ ಅದ್ದೂರಿ ಅಂಬಾರಿ ಉತ್ಸವದ ಮೆರವಣಿಗೆ

h8-ambari 2
Published on

ಹುಬ್ಬಳ್ಳಿ: ಶ್ರೀ ಸಿದ್ಧಾರೂಢರ ಹಾಗೂ ಸಮಕಾಲೀನ ಮಹಾತ್ಮರ ಅಂಬಾರಿ ಉತ್ಸವ ಸಮಿತಿ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಶ್ರೀ ಸಿದ್ಧಾರೂಢರ ಹಾಗೂ ಸಮಕಾಲೀನ ಮಹಾತ್ಮರ ಸಂಗಮ ರಥಯಾತ್ರೆ ನಿಮಿತ್ತ ಐದು ಆನೆಗಳ ಅಂಬಾರಿ ಉತ್ಸವದ ಮೆರವಣಿಗೆ ನಗರದಲ್ಲಿ ಭಾನುವಾರ ಅದ್ಧೂರಿಯಾಗಿ ಜರುಗಿತು.

ಇಲ್ಲಿಯ ನೆಹರು ಮೈದಾನದಲ್ಲಿ ಅಂಬಾರಿ ಉತ್ಸವಕ್ಕೆ ಶಿರಹಟ್ಟಿ ಫಕೀರ ಸಂಸ್ಥಾನ ಮಠದ ಶ್ರೀ ಫಕೀರಸಿದ್ಧರಾಮ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, 2 ಸಲ ಆನೆ ಅಂಬಾರಿ ಮೆರವಣಿಗೆ ಈ ವರ್ಷದಲ್ಲಿ ನಡೆಯುತ್ತಿದೆ. ಫಕ್ಕೀರೇಶ್ವರ ಶ್ರೀಗಳ ಜನ್ಮ ದಿನದ ಅಂಗವಾಗಿ ಹಾಗೂ ಈಗ ಆನೆ ಅಂಬಾರಿ ಮಾಡಲಾಗುತ್ತಿದೆ. ಭಕ್ತಿಯಿಂದ ಅಂಬಾರಿ ಉತ್ಸವ ಮಾಡಬೇಕೆನ್ನುವ ಕಲ್ಪನೆ ಶ್ಲಾಘನೀಯ. ಗುರುವಿನ ಮೇಲೆ ಭಕ್ತಿ ಇಟ್ಟು ಮಾಡುತ್ತಿರುವ ಕಾರ್ಯ ವಿಶೇಷವಾದದು. ಮನೆಯಲ್ಲಿದ್ದುಕೊಂಡು ತಂದೆ-ತಾಯಿಯನ್ನು ಪ್ರೀತಿಯಿಂದ ಜತನ ಮಾಡಬೇಕು. ದ್ವೇಷ ಬಿಡು, ಪ್ರೀತಿ ಮಾಡು ಎಂಬ ಫಕೀರೇಶ್ವರರ ಸಂದೇಶ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ದೇವರು, ಸ್ವಾಮೀಜಿ ಎಂಬುದು ಮಾಯವಾಗುತ್ತಿವೆ. ಇನ್ನೂ ಹತ್ತು ವರ್ಷಕ್ಕೆ ಶಾಂತಿ ಇರುವುದಿಲ್ಲ. ನಂಬಿಕೆ, ದೇವರು ಇರುವುದಿಲ್ಲ. ಭಕ್ತಿ, ಆರಾಧನೆ ಮಾಡುವ ಜನರನ್ನು ಕಳೆದುಕೊಳ್ಳುತ್ತೇವೆ ಎಂಬ ಸಂದೇಶ ಹರಿದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮಹಾತ್ಮರ ದರ್ಶನ ಜನರಿಗೆ ಸಿಗುವಂತೆ ಮಾಡಿರುವುದು ಶ್ಲಾಘನೀಯ ಎಂದರು.

ಸಂಸ್ಥಾಪಕ ಅಧ್ಯಕ್ಷ ಮನೋಜಕುಮಾರ ಗದಗಿನ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕುಂದಗೋಳದ ಶ್ರೀ ಬಸವಣ್ಣಜ್ಜನವರು, ಜತ್ತದ ಶ್ರೀ ಮಹಾಂತ ದೇವರು ಸಾನ್ನಿಧ್ಯ ವಹಿಸಿದ್ದರು.

ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಶಿವಾನಂದ ಕರಿಗಾರ, ಮಹಾಬಳೇಶ್ವರ ಅಣ್ಣಿಗೇರಿ, ರಂಗಾ ಬದ್ದಿ, ಹನುಮಂತಪ್ಪ ಹಳ್ಯಾಳ, ಅರ್ಜುನ ಅವ್ವಣ್ಣವರ, ಈರಣ್ಣ ಕೊರಕೊಪ್ಪ, ವರ್ಷಾ ಗದಗಿನ, ಬಸವರಾಜ ಕೆರಕಣ್ಣವರ, ವಿ.ಸಿ. ಸೋಮನಕಟ್ಟಿ, ಮಹಾದೇವಪ್ಪ ಜೀರಿಗಿ ಇತರರು ಇದ್ದರು.

ಬಾಗಿ ಬಂದವರ ಬದುಕು ಬಂಗಾರ: ಶ್ರೀ ಸಿದ್ಧಾರೂಢರ ಬಳಿ ಬಾಗಿ ಬಂದವರ ಬದುಕೆಲ್ಲ ಬಂಗಾರವಾಗಿದೆ. ಅಂಥ ಮಹಾಮಹಿಮರ ಆಶೀರ್ವಾದ ನಮ್ಮ ನಾಡಿನ ಜನತೆಗೆ ಸಿಕ್ಕಿರುವುದು ಪುಣ್ಯ ಎಂದು ಅಣ್ಣಿಗೇರಿ ದಾಸೋಹಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿಯ ಸಿದ್ಧಾರೂಢ ಮಠದ ಆವರಣದಲ್ಲಿ ಸಂಜೆ ಏರ್ಪಡಿಸಿದ್ದ ಅಂಬಾರಿ ಉತ್ಸವದ ಸಮಾರೋಪದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶ್ರೀಸಿದ್ಧಾರೂಢರ ಪರಂಪರೆಗೆ ಬಹುದೊಡ್ಡ ಇತಿಹಾಸವಿದೆ. ಜಾತಿ, ಮತ, ಪಂಥಗಳಿಗೆ ಸೀಮಿತವಾಗದೇ ಎಲ್ಲರಿಗೂ ದಾರಿದೀಪವಾಗಿದ್ದಾರೆ. ವ್ಯಾಸ ಪರಂಪರೆ ನಂತರ ಬದವರೆಲ್ಲರ ಪರಂಪರೆಯನ್ನು ಮೈಗೂಡಿಸಿಕೊಂಡಿದ್ದವರು ಶ್ರೀ ಸಿದ್ಧಾರೂಢರು ಎಂದರು.

ಶ್ರೀಮಠದ ಟ್ರಸ್ಟ್ ಕಮಿಟಿ ಧರ್ಮದರ್ಶಿ ಶಾಮಾನಂದ ಪೂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀ ರಾಮಾನಂದ ಭಾರತಿ ಸ್ವಾಮೀಜಿ, ಶ್ರೀ ಪರಿಪೂರ್ಣಾನಂದ ಸ್ವಾಮೀಜಿ, ಶ್ರೀ ಬಸವಾನಂದ ಸ್ವಾಮೀಜಿ, ಲಲಿತಾ ಮಾತಾಜಿ, ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣ ಶೆಟ್ಟರ್, ಅಂದಾನಪ್ಪ ಚಾಕಲಬ್ಬಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net