

ಇ-ಆಡಳಿತ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಮಗ್ರ ನಾಗರಿಕರ ಸೇವಾ ಕೇಂದ್ರದಿಂದ ಗ್ರಾಮೀಣ ಭಾಗದಲ್ಲಿ ಎಲ್ಲ ನಾಗರಿಕ ಸೇವೆಗಳು ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಲು ವಿವಿಧ ಜಿಲ್ಲೆಗಳಲ್ಲಿ 'ಗ್ರಾಮ ಒನ್' ಕೇಂದ್ರ ತೆರೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಒನ್ಗೆ ಫ್ರಾಂಚೈಸಿಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಬೇರೆ ರೀತಿಯಲ್ಲಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಯಾವ ಜಿಲ್ಲೆಗಳಲ್ಲಿ ನೇಮಕ?: ಕಲಬುರಗಿ, ರಾಯಚೂರು, ಯಾದಗಿರಿ, ವಿಜಯನಗರ, ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಆಯ್ದ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಫ್ರಾಂಚೈಸಿ ಆಧಾರದ ಮೇಲೆ ಗ್ರಾಮ ಒನ್ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ.
ಅರ್ಹತೆಗಳೇನು?: ಯಾವುದೇ ವಿಭಾಗದಲ್ಲಿ ಪದವಿ ಪಡೆದಿದ್ದು, ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಕನಿಷ್ಠ 1 ರಿಂದ 2 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯವಿರಬೇಕು. ಗ್ರಾಮ ಒನ್ ಪೊಲೀಸ್ ತಪಾಸಣಾ ಪ್ರಮಾಣ ಪತ್ರ ಸಲ್ಲಿಸಬೇಕು. ಸಮುಚ್ಛಯ ಕೇಂದ್ರ ಸ್ಥಾನದಲ್ಲಿರಬೇಕು ಮತ್ತು ಸಾರ್ವಜನಿಕರು ಸುಲಭವಾಗಿ ಸಂಪರ್ಕಿಸುವಂತಿರಬೇಕು.
ತಂತ್ರಜ್ಞಾನದ ಅವಶ್ಯಕತೆಗಳೇನು?: ಡೆಸ್ಕ್ಟಾಪ್/ ಲ್ಯಾಪ್ಟಾಪ್, ಬಹುಉದ್ದೇಶದ ಪ್ರಿಂಟರ್ (ಪ್ರಿಂಟ್/ ಸ್ಕ್ಯಾನ್), ಬಯೋಮೆಟ್ರಿಕ್ ಸ್ಕ್ಯಾನರ್ (ಸೆಕ್ಯೂಜೆನ್ ಹ್ಯಾಮಸ್ಟರ್ ಪ್ರೊ20), ವೆಬ್ ಕ್ಯಾಮರಾ, ವೈ-ಫೈ ರಿಸೀವರ್, ಇಬ್ಬರು ಅಂತರ್ಜಾಲ ಸೇವೆ ಒದಗಿಸುವವರಿಂದ ಅಂತರ್ಜಾಲ ಸಂಪರ್ಕ ಹೊಂದಿರಬೇಕು.
ಅರ್ಜಿಶುಲ್ಕ: ಫ್ರಾಂಚೈಸಿ ಪ್ರಾಯೋಗಿಕ ಯೋಜನೆಗೆ ಅರ್ಜಿಶುಲ್ಕ 100 ರೂ. ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 4.5.2022
ಅಧಿಸೂಚನೆ: https://bit.ly/3MCFYYg
ಮಾಹಿತಿಗೆ: karnatakaone.gov.in / sevasindhu.karnataka.gov.in