ಕೃಷಿಯಲ್ಲಿ ಖುಷಿ ಕಂಡ ಪದವೀಧರ

ಹಳೇಬೀಡಿನ ದ್ವಾರಸಮುದ್ರ ಕೆರೆ ಸಮೀಪದಲ್ಲಿರುವ ನರಸಿಂಹ ಮೂರ್ತಿ ಅವರ ತೋಟದಲ್ಲಿ ಅಡಕೆ ಫಸಲು ಬಿಡುವ ಹಂತಕ್ಕೆ ಬಂದಿರುವುದು.
ಹಳೇಬೀಡಿನ ದ್ವಾರಸಮುದ್ರ ಕೆರೆ ಸಮೀಪದಲ್ಲಿರುವ ನರಸಿಂಹ ಮೂರ್ತಿ ಅವರ ತೋಟದಲ್ಲಿ ಅಡಕೆ ಫಸಲು ಬಿಡುವ ಹಂತಕ್ಕೆ ಬಂದಿರುವುದು.
Published on

ಹಳೇಬೀಡು: ಪಟ್ಟಣದಲ್ಲಿ ಕೆಲಸಕ್ಕೆ ಹೋಗುವ ಅವಕಾಶವಿದ್ದರೂ ಅದನ್ನು ಬಿಟ್ಟು ಪಿತ್ರಾರ್ಜಿತ ಸ್ವತ್ತಾಗಿ ತನ್ನ ಪಾಲಿಗೆ ಬಂದ ಒಂದೂವರೆ ಎಕರೆ ಜಮೀನಿನಲ್ಲಿ ಯುವ ರೈತನೊಬ್ಬ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾದರಿಯಾಗಿ ಹೊರಹೊಮ್ಮಿದ್ದಾನೆ.

ಹಳೇಬೀಡಿನ ಯುವ ರೈತ ನರಸಿಂಹ ಮೂರ್ತಿ ಅಡಕೆ ಸಸಿ ನೆಟ್ಟು ಪೋಷಿಸಿ, ಸಂಪಾದನೆಯ ಮಾರ್ಗ ಕಂಡುಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಪದವಿ ವಿದ್ಯಾಭ್ಯಾಸ ಮುಗಿದ ಬಳಿಕ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ನರಸಿಂಹ ಮೂರ್ತಿ, ಕೆಲ ತಿಂಗಳು ಅಲ್ಲಿ ಬದುಕು ನಡೆಸಿದರು. ಆದರೆ, ರಾಜಧಾನಿಯ ಧಾವಂತದ ಬದುಕು ಮತ್ತು ಕೆಲಸದ ಒತ್ತಡ ಇವರನ್ನು ಪುನಃ ಹಳ್ಳಿಯೆಡೆಗೆ ಸೆಳೆಯಿತು.

ತಂದೆ ನಾಗರಾಜ್ ಅವರೊಂದಿಗೆ ಬಾಲ್ಯದಿಂದಲೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರಿಂದ ವ್ಯವಸಾಯದ ಸೆಳೆತ ಅವರನ್ನು ಹಳೇಬೀಡಿಗೆ ಮರಳಿ ಬರುವಂತೆ ಮಾಡಿತು. ತಂದೆ, ಚಿಕ್ಕಪ್ಪ ಜತೆಗೂಡಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡ ನರಸಿಂಹ ಮೂರ್ತಿ, ಆಧುನಿಕ ಮಾದರಿಗಳನ್ನು ಅಳವಡಿಸಿಕೊಳ್ಳುವತ್ತ ಹೆಜ್ಜೆ ಹಾಕಿದರು. ಯಂತ್ರೋಪಕರಣಗಳ ಬಳಕೆ ಕುರಿತು ರೈತರನ್ನು ಜಾಗೃತಿಗೊಳಿಸಲು ಕೃಷಿ ಉಪಕರಣಗಳನ್ನು ತಾವೇ ಜಮೀನಿಗೆ ಕೊಂಡೊಯ್ದು ಅದರ ಉಪಯೋಗವನ್ನು ತಿಳಿಸಿಕೊಡುವ ಜತೆಗೆ ಬೆಳೆಗಳಿಗೆ ಬೇಕಾದ ಅಗತ್ಯ ಪೋಷಕಾಂಶಗಳ ಪೂರೈಕೆ ಬಗ್ಗೆ ಮಾಹಿತಿ ನೀಡುವ ಕಾರ್ಯ ಮಾಡಿದರು. ಈ ನಡುವೆ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ಸಂಸ್ಥೆಯೊಂದರ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಿಸಿ ವಿವಿಧ ರೀತಿಯ ಬೆಳೆಗಳನ್ನು ಬೇರೆ ಬೇರೆ ಋತುಗಳಲ್ಲಿ ಉಳಿಸಿ ಬೆಳೆಸುವ ವಿಧಾನವನ್ನು ರೈತರಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಉಚಿತವಾಗಿ ತಿಳಿಸಿಕೊಟ್ಟರು.

8 ವರ್ಷಗಳ ಹಿಂದೆ ಅವೆಲ್ಲಕ್ಕೂ ವಿದಾಯ ಹೇಳಿ ಪಿತ್ರಾರ್ಜಿತವಾಗಿ ತಮ್ಮ ಪಾಲಿಗೆ ಬಂದ ಒಂದೂವರೆ ಮತ್ತು ಚಿಕ್ಕಪ್ಪನ ಒಂದು ಎಕರೆ ಭೂಮಿಯಲ್ಲಿ ಅಡಕೆ ಸಸಿ ನೆಟ್ಟು ಪೋಷಿಸುವ ಕಾರ್ಯ ಆರಂಭಿಸಿದರು. ಫಸಲು ಬಿಡುವವರೆಗೂ ಜಮೀನಿನಲ್ಲಿ ಇತರ ಮೂಲದಿಂದ ಆದಾಯ ತೆಗೆಯಲು ತರಕಾರಿ/ಸೊಪ್ಪು ಮುಂತಾದವನ್ನು ಉಪ ಬೆಳೆಯಾಗಿ ಅಭಿವೃದ್ಧಿಪಡಿಸಿಕೊಂಡು ತೋಟವನ್ನು ಕಾಪಾಡಿಕೊಳ್ಳುತ್ತಿದ್ದಾರೆ.

ಮಾಲೀಕತ್ವದ ಜತೆಗೆ ಕಾರ್ಮಿಕನಾಗಲೂ ಸೈ: ತನ್ನ ಪಾಲಿಗೆ ಬಂದ ಭೂಮಿಯನ್ನು ಮೊದಲಿಗೆ ಉಳುಮೆ ಮಾಡಿಸಿ ಅಚ್ಚುಕಟ್ಟು ಮಾಡಿಕೊಂಡರು. ಜಮೀನು ದ್ವಾರಸಮುದ್ರ ಕೆರೆ ಏರಿ ಪಕ್ಕದಲ್ಲಿ ಉತ್ತಮ ನೀರಾವರಿ ಪ್ರದೇಶದಲ್ಲಿ ಇದ್ದುದ್ದರಿಂದ ಅಡಕೆ ಬೆಳೆಯಲು ಸೂಕ್ತ ಎಂಬ ಅಭಿಪ್ರಾಯವನ್ನು ತನ್ನ ಚಿಕ್ಕಪ್ಪ ನೀಡಿದ್ದರಿಂದ ಅದನ್ನು ಪಾಲಿಸಿದರು. 1600 ಅಡಕೆ ಸಸಿಗಳನ್ನು 20,000 ರೂ. ಬೆಲೆಗೆ ಖರೀದಿ ಮಾಡಿ ತಂದು ನೆಟ್ಟರು. ಸಸಿ ನೆಟ್ಟ ದಿನದಿಂದ ಈವರೆಗೆ ಅವುಗಳ ಪೋಷಣೆ ಸೇರಿದಂತೆ ವಿವಿಧ ಕೆಲಸಗಳಿಗೆ ಅಂದಾಜು 2.50 ಲಕ್ಷ ರೂ. ವೆಚ್ಚ ಮಾಡಿದ್ದು, ಫಸಲು ಕೈಗೆ ಬರುವ ಹಂತದಲ್ಲಿದೆ. ಇದರ ನಡುವೆ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಋತುಮಾನಕ್ಕೆ ತಕ್ಕಂತೆ ತರಕಾರಿಗಳನ್ನು ಬೆಳೆದು ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ. ಅವರೆಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಹಸಿರು ಮೆಣಸಿಕಾಯಿಯನ್ನು ಉಪಬೆಳೆಯಾಗಿ ಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಇದರಿಂದಲೇ ವಾರ್ಷಿಕ 1 ಲಕ್ಷ ರೂ. ಉಳಿತಾಯ ಮಾಡುತ್ತಿದ್ದಾರೆ.

ತಂದೆ, ಚಿಕ್ಕಪ್ಪನ ದಾರಿಯೇ ಆದರ್ಶ: ವ್ಯವಸಾಯ ಕ್ಷೇತ್ರಕ್ಕೆ ಬರುವ ಮುನ್ನ ತಂದೆ ಹಾಗೂ ಚಿಕ್ಕಪ್ಪ ಕೃಷಿ ಜಮೀನಿನಲ್ಲಿ ನಡೆಸುತ್ತಿದ್ದ ಚಟುವಟಿಕೆಯನ್ನು ನರಸಿಂಹ ಮೂರ್ತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಒಂದು ದಿನವೂ ಜಮೀನಿಗೆ ಹೋಗುವುದನ್ನು ತಪ್ಪಿಸದೆ ಶುಭ ಕಾರ್ಯವಿದ್ದರೂ ಹಸು_-ಕರುಗಳ ಆರೈಕೆ ಹಾಗೂ ಜಮೀನಿನ ರಕ್ಷಣೆಯನ್ನು ತಪ್ಪಿಸುತ್ತಿರಲಿಲ್ಲ. ಮನೆಯಿಂದ ಜಮೀನಿಗೆ 2.50 ಕಿ.ಮೀ. ದೂರವಿದ್ದು, ಸೈಕಲ್ನಲ್ಲೇ ತೆರಳುತ್ತಿದ್ದರು. ತಂದೆ ಬೆಳಗ್ಗೆ 5ಕ್ಕೆ ಜಮೀನಿಗೆ ಹೋಗುತ್ತಿದ್ದು, ಚಿಕ್ಕಪ್ಪನ ಜತೆಗೂಡಿ 9 ಗಂಟೆಯವರೆಗೂ ಕೆಲಸ ಮಾಡುತ್ತಿದ್ದರು. ಇದನ್ನೆಲ್ಲ ಬಾಲ್ಯದಿಂದಲೂ ನೋಡಿಕೊಂಡು ಬಂದಿದ್ದ ನನಗೆ ಪಟ್ಟಣದ ಕೆಲಸಕ್ಕಿಂತಲೂ ಕೃಷಿ ಕಾಯಕವೇ ಹೆಚ್ಚು ಸಮಾಧಾನ ತರುವ ಉದ್ಯೋಗ ಎನಿಸಿತು. ಹಾಗಾಗಿ ಇದರಲ್ಲೇ ಮುಂದುವರಿಯುವ ಯೋಚನೆ ಮಾಡಿದೆ. ಈ ವಿಷಯದಲ್ಲಿ ತಂದೆ ಮತ್ತು ಚಿಕ್ಕಪ್ಪನೇ ನನಗೆ ಆದರ್ಶ ಎನ್ನುತ್ತಾರೆ ನರಸಿಂಹ ಮೂರ್ತಿ.

ಅಡಕೆ ವಾಣಿಜ್ಯ ಬೆಳೆಯಾದರೂ ಅನೇಕ ರೈತರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬಹಳ ಕಾಲಕ್ಕೆ ಪ್ರಯೋಜನಕಾರಿಯಾಗುತ್ತದೆ. ಇದರ ಜತೆಗೆ ಸಣ್ಣ ಪುಟ್ಟ ತರಕಾರಿ ಬೆಳೆಯುವುದೂ ಸುಲಭ. ಕೃಷಿ ಭೂಮಿಯನ್ನು ಫಲವತ್ತಾಗಿ ಉಳಿಸಿಕೊಳ್ಳಲು ಸತತವಾಗಿ ಕಾಯಕ ಮುಂದುವರಿಸುವುದು ಅವಶ್ಯಕ ಎಂಬ ಅಭಿಪ್ರಾಯವನ್ನು ನರಸಿಂಹ ಮೂರ್ತಿ ವ್ಯಕ್ತಪಡಿಸುತ್ತಾರೆ.

ನಮ್ಮದು ಅಪ್ಪಟ ಕೃಷಿಕರ ಕುಟುಂಬ. ತಂದೆ ಸೇರಿದಂತೆ ಪೂರ್ವಿಕರು ವ್ಯವಸಾಯ ಬಿಟ್ಟು ಬೇರಾವ ವೃತ್ತಿಯನ್ನೂ ಮಾಡಿಲ್ಲ. ನಮ್ಮ ಚಿಕ್ಕಪ್ಪನ ಮಕ್ಕಳು ಓದಿ ಕೆಲಸಕ್ಕೆ ಸೇರಿದ್ದಾರೆ. ನನ್ನ ಅಕ್ಕಂದಿರೂ ವಿವಾಹವಾಗಿ ಬೇರೆ ಊರುಗಳಲ್ಲಿದ್ದಾರೆ. ಪ್ರಸ್ತುತ ನಾನು ತಂದೆ ಹಾಗೂ ತಾಯಿಯ ಯೋಗಕ್ಷೇಮ ನೋಡಿಕೊಂಡು ಕೃಷಿ ಕಾಯಕದಲ್ಲಿ ಮಗ್ನನಾಗಿದ್ದೇನೆ. ಇದಕ್ಕಿಂತಲೂ ನೆಮ್ಮದಿಯ ಜೀವನ ಸಿಗುವುದು ಕಷ್ಟ ಎನ್ನುವುದು ನನ್ನ ಭಾವನೆ.

ನರಸಿಂಹ ಮೂರ್ತಿ ಕೃಷಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net