

ಮಂಡ್ಯ: ಗಣೇಶ ಹಬ್ಬದ ಹಿನ್ನೆಲೆ ಬಡಾವಣೆಯ ರಸ್ತೆಬದಿ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳನ್ನೇ ಕಳ್ಳರು ಕದ್ದಿದ್ದಾರೆ!
ಇಂತಹ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ಭಾನುವಾರ ಬೆಳಗಿನಜಾವ ಸಂಭವಿಸಿದೆ. ಬಡಾವಣೆಯ ಮಕ್ಕಳೆಲ್ಲರೂ ಸೇರಿ ಬಹಳ ಸಂಭ್ರಮದಿಂದ ಒಂದೊಂದು ಜವಾಬ್ದಾರಿ ವಹಿಸಿಕೊಂಡು ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಎರಡು ದಿನದಿಂದ ಬೆಳಗ್ಗೆ ಮತ್ತು ಸಂಜೆ ಪೂಜೆ ಮಾಡಿ ನೈವೈದ್ಯ ಅರ್ಪಿಸುತ್ತಿದ್ದರು. ಬಡವಾಣೆಯ ಮಹಿಳೆಯೂ ಮಕ್ಕಳ ಈ ಸಂಭ್ರಮಕ್ಕೆ ಸಾಥ್ ಕೊಟ್ಟಿದ್ದರು. ಒಬ್ಬೊಬ್ಬರು ಒಂದೊಂದು ತರಹದ ಪ್ರಸಾದ ತಯಾರಿಸಿ ಮಕ್ಕಳಿಗೆಲ್ಲ ವಿತರಿಸುತ್ತಿದ್ದರು.
ಇಂದು ಸಂಜೆ ಗಣೇಶ ವಿಸರ್ಜನೆಗೂ ಮಕ್ಕಳು ತಯಾರಿ ಮಾಡಿಕೊಂಡಿದ್ದರು. ಇಂದು ಮುಂಜಾನೆ ವೇಳೆ ಯಾರೋ ಕಿಡಿಗೇಡಿಗಳು ದೇವರ ಮೂರ್ತಿಗಳನ್ನೇ ಹೊತ್ತೊಯ್ದಿದ್ದಾರೆ. ಈ ಘಟನೆಯಿಂದಾಗಿ ಪುಟ್ಟ ಮಕ್ಕಳು ಕಣ್ಣೀರು ಹಾಕಿದ್ದು, ಸ್ಥಳದಲ್ಲಿದ್ದ ಮಹಿಳೆಯರೂ ಭಾವುಕರಾದರು. ಕಿಡಿಗೇಡಿಗಳು ಕೃತ್ಯಕ್ಕೆ ಬಡಾವಣೆ ಜನರು ತೀವ್ರ ಬೇಸರಗೊಂಡಿದ್ದಾರೆ. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.