

ಜಮಖಂಡಿ: ಶೋಷಿತ ಸಮುದಾಯ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಪ್ರಗತಿ ಪಥದತ್ತ ಸಾಗಲು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಕಾರ್ಯ ಯೋಜನೆಗಳು ಸಹಕಾರಿಯಾಗಿವೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಅಭಿವೃದ್ಧಿ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಊಳುವವನೆ ಭೂಮಿಯ ಒಡೆಯ, ಶಿಕ್ಷಣ, ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯ ಸೇರಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಜೀತ ಪದ್ಧತಿ ಮುಕ್ತವಾಗಬೇಕೆಂಬ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಇದನ್ನೂ ಓದಿ: ರಾಜ್ಯಕ್ಕೆ ಮಾಜಿ ಸಿಎಂ ಡಿ. ದೇವರಾಜ ಅರಸು ಕೊಡುಗೆ ಅಪಾರ
ತಹಸೀಲ್ದಾರ್ ಸದಾಶಿವ ಮಕ್ಕೋಜಿ ಮಾತನಾಡಿ, ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಿಗಬೇಕೆಂಬ ಅವರ ಅಶಯವಾಗಿತ್ತು.
ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬಂತೆ ಎಲ್ಲ ಸಮುದಾಯಕ್ಕೂ ವಸತಿ ಸೌಲಭ್ಯ, ಶಿಕ್ಷಣದಲ್ಲಿ ಸಮಾನತೆ ಕಲ್ಪಿಸುವ ಮೂಲಕ ಸಮಾಜಮುಖಿಯಾಗಿ ಶ್ರಮಿಸಿದವರು ಡಿ. ದೇವರಾಜ ಅರಸು ಎಂದರು. ಇದೇ ವೇಳೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ನಂತರ ನಗರದ ಹಳೇ ತಹಸೀಲ್ದಾರ್ ಕಚೇರಿಯಿಂದ ಡಿ. ದೇವರಾಜ ಅರಸು ಅವರ ಭಾವಚಿತ್ರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ಆಡಳಿತ ಸೌಧದವರೆಗೆ ವಿವಿಧ ವಾದ್ಯಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಯಿತು.
ನಗರಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಹಿಂದುಳಿದ ವರ್ಗ ಕಲ್ಯಾಣಾಧಿಕಾರಿ ರಾಮಲಿಂಗ ಭೈರವಾಡಗಿ, ಸಮಾಜ ಕಲ್ಯಾಣಾಧಿಕಾರಿ ಸಿ.ಎಸ್. ಗಡ್ಡದೇವರಮಠ, ಶಿರಸ್ತೇದಾರ್ ಎಸ್.ಡಿ. ದಳವಾಯಿ, ಬಸವರಾಜ ಸಿಂಧೂರ, ಶಶಿಧರ ಚಲವಾದಿ, ಕಸಾಪ ಅಧ್ಯಕ್ಷ ಸಂತೋಷ ತಳಕೇರಿ, ನಾಗಪ್ಪ ಸನದಿ, ಹಿಂದುಳಿದ ವರ್ಗ ವಸತಿ ನಿಲಯದ ನಿಲಯಪಾಲಕ ಬಸವರಾಜ ಆಲಗೂರ, ಕಲ್ಮೇಶ ಮರನೂರ, ಶ್ರೀಶೈಲ ಮೋದಿ, ಶೀತಲ ಯಲಗುದ್ರಿ, ಪವನ ಜಾಧವ, ಸುಮಿತ್ರಾ ಮಗದುಮ್, ಅಶ್ವಿನಿ ರಬಕವಿ, ಅನಿತಾ ಶಿರಗೊಂಡ, ಭಾಗ್ಯಾ ಕದಂ ಇತರರಿದ್ದರು.