ಜನರ ಆಸ್ತಿ ಕಬಳಿಸುತ್ತಿರುವ ಸರ್ಕಾರ

jkd 23-1 press
ಜೆಕೆಡಿ 23-2 ಜಮಖಂಡಿ ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು.
Published on

ಜಮಖಂಡಿ: ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ವಕ್ಫ್ ಕಾಯ್ದೆ ಜಾರಿಗೆ ತಂದಿದ್ದಾರೆ. ಕಾಂಗ್ರೆಸ್ ಸರ್ಕಾರದವರು ಅದನ್ನು ಅನುಷ್ಠಾನಗೊಳಿಸಿ ರೈತರು, ಮಠಮಾನ್ಯಗಳು, ದೇವಾಲಯಗಳ ಆಸ್ತಿಗಳನ್ನು ಕಬಳಿಸಲು ಹೊರಟಿರುವುದು ಯಾವ ನ್ಯಾಯ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ನಗರದ ರಮಾ ನಿವಾಸದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಾವಿರಾರು ಎಕರೆ ಜಮೀನು, ಆಸ್ತಿಗಳನ್ನು ವಕ್ಫ್ ಎಂದು ಗುರುತಿಸಲಾಗಿದೆ. 1974 ರ ಗೆಜೆಟ್ ಪ್ರಕಾರ 45 ಸಾವಿರ ಎಕರೆ ಜಮೀನು ವಕ್ಫ್‌ಗೆ ಒಳಪಟ್ಟಿದೆ ಎಂದು ಕಾಂಗ್ರೆಸಿಗರು ಹೇಳಿ ಜನರಲ್ಲಿ ಭಯ ಹುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ. ಕಾಯ್ದೆ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡಲಿದೆ ಎಂದರು.

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಸ್ವಂತ ಟ್ರಸ್ಟಿಗೆ 3 ಕೋಟಿ ರೂ. ಬೆಲೆ ಬಾಳುವ ನಿವೇಶನ ಪಡೆದಿದ್ದರು. ಬಿಜೆಪಿ ಹೋರಾಟದಿಂದಾಗಿ ಅದನ್ನು ವಾಪಸ್ ನೀಡುವಂತಾಯಿತು. ಆದರೆ ಅವರ ಮೇಲೆ ಯಾವುದೇ ಕ್ರಮ ಜರುಗಿಸದೆ ಇರುವುದು ಕಾಂಗ್ರೆಸ್ ಸರ್ಕಾರದ ಭ್ರಷ್ಟತೆಗೆ ಹಿಡಿದ ಕನ್ನಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಲ್ಮೀಕಿ ನಿಗಮದ 187 ಕೋಟಿ ರೂ. ಲಪಟಾಯಿಸಿದ್ದಕ್ಕೆ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಿದರು. ಆದರೆ ಸಿ.ಎಂ. ಸಿದ್ದರಾಮಯ್ಯ ಕುಟುಂಬದವರು ನಿಯಮ ಉಲ್ಲಂಘಿಸಿ ಮುಡಾದಿಂದ 14 ನಿವೇಶನಗಳನ್ನು ಪಡೆದಿದ್ದರು. ಆದರೆ, ಅವರು ರಾಜೀನಾಮೆ ನೀಡದೆ ಆಡಳಿತದಲ್ಲಿ ಮುಂದುವರಿದಿರುವುದು ಸರಿಯಲ್ಲ ಎಂದರು.

ನಕಲಿ ನೆಪದಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಬಡವರ ಹೊಟ್ಟೆ ಮೇಲೆ ಬರೆ ಎಳೆಯಲು ಮುಂದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿ.ಟಿ.ಉಪಾಧ್ಯ, ನಗರ ಘಟಕ ಅಧ್ಯಕ್ಷ ಅಜಯ ಕಡಪಟ್ಟಿ, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ ಕಾಳೆ, ತಾಲೂಕಾಧ್ಯಕ್ಷ ರಮೇಶ ಆಲಬಾಳ, ಗಣೇಶ ಶಿರಗಣ್ಣನವರ, ಶಂಕರ ಕಾಳೆ, ಯಮನೂರ ಮೂಲಂಗಿ, ಪ್ರಶಾಂತ ಶಂಕ್ರಪ್ಪಗೋಳ, ಜೆಡಿಎಸ್ ಪಕ್ಷದ ಚನ್ನಬಸು ಕತಾಟೆ, ಮಾಧ್ಯಮ ಸಂಯೋಜಕ ಶ್ರೀಧರ ಕಂಬಿ, ಕುಶಾಲ ವಾಗ್ಮೋರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net