ಸರ್ಕಾರಿ ಶಾಲೆ ವಿದ್ಯಾರ್ಥಿನಿ ಅವನಿ ಮಾದರಿ

nrp avani
ಎಸ್‌ಎಸ್‌ಲ್‌ಸಿಯಲ್ಲಿ 615 ಅಂಕ ಪಡೆದ ಮುತ್ತಿನಕೊಪ್ಪ ಅವನಿಯನ್ನು ಶಿಕ್ಷಣ ಇಲಾಖೆಯಿಂದ ಪುರಸ್ಕರಿಸಲಾಯಿತು. ಕೆ.ಆರ್.ಪುಷ್ಪಾ, ಸಿ.ಮನೋಹರ್, ಸೇವ್ಯಾನಾಯಕ್, ರಾಘವೇಂದ್ರ, ನರೇಂದ್ರ, ಗಂಗಾಧರ್, ಶಶಿಧರ್ ಇತರರಿದ್ದರು.
Published on

ಎನ್.ಆರ್.ಪುರ: ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 615 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮುತ್ತಿನಕೊಪ್ಪ ಸರ್ಕಾರಿ ಪ್ರೌಢಶಾಲೆ ಅವನಿ ಎಂ.ಗೌಡ 1ನೇ ತರಗತಿಯಿಂದಲೂ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿರುವ ಪ್ರತಿಭಾನ್ವಿತೆ ಎಂದು ಬಿಇಒ ಕೆ.ಆರ್.ಪುಷ್ಪಾ ಮೆಚ್ಚುಗೆ ವ್ಯಕ್ತಪಡಿಸಿದರು.

ಗುರುವಾರ ಮುತ್ತಿನಕೊಪ್ಪದ ಅವನಿ ಎಂ. ಗೌಡ ಅವರನ್ನು ಅವರ ಮನೆಯಲ್ಲಿಯೇ ಶಿಕ್ಷಣ ಇಲಾಖೆ ಹಾಗೂ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಗೌರವಿಸಿ, ನಗದು ಪುರಸ್ಕಾರ ನೀಡಿ ಮಾತನಾಡಿದರು.
ಅವನಿ 8ನೇ ತರಗತಿಯಲ್ಲಿ ಪ್ರತಿಭಾ ಕಾರಂಜಿಯ ರಸಪ್ರಶ್ನೆ ಸ್ಪರ್ಧೆ, ಮತದಾರರ ಕ್ವಿಜ್‌ನಲ್ಲಿ ರಾಜ್ಯಮಟ್ಟದವರೆಗೆ ಸ್ಪರ್ಧಿಸಿದ್ದಳು. ಸಿರಿಗನ್ನಡ ಪರೀಕ್ಷೆಯಲ್ಲಿ ರಾಜ್ಯಮಟ್ಟದ ರ‌್ಯಾಂಕ್ ಪಡೆದಿದ್ದಾಳೆ. ಪಿಯುಸಿ ಪರೀಕ್ಷೆಯಲ್ಲೂ ಹೆಚ್ಚು ಅಂಕ ಗಳಿಸಲಿ ಎಂದು ಹಾರೈಸಿದರು.
ವಿದ್ಯಾರ್ಥಿನಿಯ ತಂದೆ ಸಿ.ಮನೋಹರ್ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಶಾಲೆಗೆ ಎಲ್ಲ ಮೂಲ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ. ಸರ್ಕಾರಿ ಶಾಲೆಗಳು ಮಾದರಿಯಾಗಬೇಕು ಎಂಬ ಉದ್ದೇಶದಿಂದ ಹೋರಾಟ ಮಾಡಿ ಸೌಲಭ್ಯ ಕೊಡಿಸಿದ್ದಾರೆ. ಜತೆಗೆ ದಾನಿಗಳ ನೆರವಿನಿಂದ ಶಾಲೆ ಅಭಿವೃದ್ಧಿ ಪಡಿಸಿದ್ದಾರೆ. ಮಗಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ ಶಿಕ್ಷಣ ಕೊಡಿಸಿರುವುದು ಮಾದರಿ ಎಂದು ಹೇಳಿದರು.
ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಈ ವಷರ್ ಎಸ್‌ಎಸ್‌ಎಲ್‌ಸಿಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಎನ್.ಆರ್.ಪುರ ತಾಲೂಕು 3ನೇ ಸ್ಥಾನ ಪಡೆದಿದೆ. ಮುಂದಿನ ವರ್ಷ 2ನೇ ಸ್ಥಾನ ಪಡೆಯಬೇಕು ಎಂಬ ಗುರಿ ಹೊಂದಿದ್ದೇವೆ ಎಂದರು.
ಅವನಿ ಎಂ.ಗೌಡ ಅವರ ತಂದೆ ಸಿ.ಮನೋಹರ್, ತಾಯಿ ಸಂಜನಾ, ಗ್ರಾಪಂ ಉಪಾಧ್ಯಕ್ಷ ನರೇಂದ್ರ, ಮುತ್ತಿನಕೊಪ್ಪ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಗಂಗಾಧರ್, ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಶಶಿಧರ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸೇವ್ಯಾನಾಯಕ್, ಮುಖಂಡ ವಿಜಯಕೃಷ್ಣ, ವಿಜಯಕುಮಾರ್, ವಿಜು, ವಾಸು, ಕಿರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net