

ಆನಂದ ಮತ್ತಿಗಟ್ಟಿ ಸವಣೂರ
ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳ ಕಟ್ಟಡ, ಆವರಣ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಗುಣಮಟ್ಟದ ಶಿಕ್ಷಣ ದೊರಕುವಲ್ಲಿ ಹಿನ್ನಡೆ ಉಂಟಾಗುತ್ತಿದ್ದು, ಮಕ್ಕಳ ಭವ್ಯ ಭವಿಷ್ಯದ ನಿರ್ವಣಕ್ಕೆ ಅಡ್ಡಿಯಾಗುತ್ತಿತದೆ.
ತಾಲೂಕಿನಲ್ಲಿ 113 ಸರ್ಕಾರಿ ಪ್ರಾಥಮಿಕ, 17 ಪ್ರೌಢ, ಅನುದಾನ ರಹಿತ ಪ್ರಾಥಮಿಕ ಶಾಲೆ 29, ಪ್ರೌಢ 10 ಒಟ್ಟು 169 ಸರ್ಕಾರಿ ಶಾಲೆಗಳಿವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಕೊಠಡಿಗಳ ದುರಸ್ತಿ ಕಾರ್ಯಕ್ಕೆ ಶಿಕ್ಷಣ ಇಲಾಖೆ ಸರ್ಕಾರಕ್ಕೆ 119 ಕೊಠಡಿಗಳ ಮಾಹಿತಿ ನೀಡಿತ್ತು. ಮಾಜಿ ಮುಖ್ಯಮಂತ್ರಿ, ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಬೇಕು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿಯ ವಿಶೇಷ ಅನುದಾನದಡಿ ಕೊಠಡಿಗಳ ನಿರ್ವಣಕ್ಕೆ 5 ಕೋಟಿ ರೂ. ನೀಡಿದ್ದರು. 32 ಶಾಲಾ ಕೊಠಡಿ, 10 ಶೌಚಗೃಹ 6 ಶಾಲೆಗಳಿಗೆ ಕಾಂಪೌಂಡ್(ತಡೆಗೋಡೆ) ನಿರ್ವಣ, ವಿವೇಕ ಯೋಜನೆಯಡಿ ಪ್ರತಿ ಕೊಠಡಿ ನಿರ್ವಣಕ್ಕೆ 13.90 ಸಾವಿರ ಅನುದಾನದಂತೆ 25 ಕೊಠಡಿಗಳ ನಿರ್ವಣಕ್ಕೆ ಚಾಲನೆ ನೀಡಲಾಗಿದೆ. ಕಾಮಗಾರಿಗಳು ಮುಕ್ತಾಯದ ಹಂತ ತಲುಪಿವೆ. 2022-23ನೇ ಸಾಲಿನ ತಾಪಂ ನಿರ್ಬಂಧಿತ ಅನುದಾನದಲ್ಲಿ 11 ಶಾಲೆಗಳನ್ನು ದುರಸ್ತಿ ಮಾಡಿ ಅನುಕೂಲ ಕಲ್ಪಿಸಲಾಗಿದೆ.
2022-23ರಲ್ಲಿ ರಾಜ್ಯ ವಲಯದಿಂದ 12 ಲಕ್ಷ ರೂಪಾಯಿ ಅನುದಾನದಲ್ಲಿ ತಾಲೂಕಿನ ಫಕೀರನಂದಿಹಳ್ಳಿ ಗ್ರಾಮದ ಶಾಲೆಯ ಒಂದು ಕೊಠಡಿ ನಿರ್ಮಾಣ ಕಾಮಗಾರಿಗೆ ಟೆಂಡರ್ ಮುಕ್ತಾಯಗೊಂಡಿದ್ದು ಕೆಲ ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ.
ಪ್ರಸಕ್ತ ಸಾಲಿನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದ ತಾಲೂಕಿನ ತೊಂಡೂರು, ತೆವರಮೆಳ್ಳಿಹಳ್ಳಿ, ಹೊಸನೀರಲಗಿ, ತೆಗ್ಗಿಹಳ್ಳಿ, ಅಲ್ಲಿಪುರ, ಸಿದ್ದಾಪುರ ಗ್ರಾಮಗಳಲ್ಲಿ ಹೊಸದಾಗಿ ಪ್ರೌಢಶಾಲೆ ಮಂಜೂರಾಗಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಕೊಠಡಿಗಳ ಅವಶ್ಯಕತೆ ಹೆಚ್ಚಾಗಿದೆ. ಸದ್ಯ 2 ತರಗತಿಗಳನ್ನು ಸೇರಿಸಿ ಒಂದೇ ಕೊಠಡಿಗಳಲ್ಲಿ ಬೋಧನೆ ಮಾಡಲಾಗುತ್ತಿದ್ದು, ಕೊಠಡಿಗಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುವಂತಾಗಿದೆ.
ಮುಖ್ಯವಾಗಿ ಕಾರಡಗಿ ಉರ್ದು, ಸವಣೂರ ಪಟ್ಟಣದ ಯುಎಂಪಿಎಸ್, ಸಿದ್ದಾಪುರ ಗ್ರಾಮದ ಶಾಲೆಗಳಿಗೆ ಕೊಠಡಿಗಳು ಅತಿ ಅವಶ್ಯವಾಗಿದೆ. ಅಂದಾಜು 30 ಸಂಪೂರ್ಣ ಶಿಥಿಲಾವಸ್ಥೆ ಹಾಗೂ 50 ಕೊಠಡಿಗಳು ದುರಸ್ತಿ ಹಂತವನ್ನು ತಲುಪಿದ್ದು, ಕಾಮಗಾರಿಗೆ ಅಂದಾಜು 5 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಬಿಇಒ ವಿ.ವಿ. ಸಾಲಿಮಠ ಮಾಹಿತಿ ನೀಡಿದ್ದಾರೆ.
ಕೆಲ ಗ್ರಾಮಗಳಲ್ಲಿ ಸುಸಜ್ಜಿತ ಕಟ್ಟಡ ಬಳಸಲು ಮುಂದಾಗದ ಶಾಲಾ ಎಸ್ಡಿಎಂಸಿ ಹಾಗೂ ಶಿಕ್ಷಕರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಂತ್ರೋಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಬಂಧಿಸಿ, 20 ಗುಂಟೆ ನಿವೇಶನ, 2 ಉತ್ತಮ ಕೊಠಡಿ ಹಾಗೂ ವಿದ್ಯಾರ್ಥಿಗಳಿಗೆ ಬಳಕೆಯಾಗುವ ಪರಿಕರಗಳು ಸಂಪೂರ್ಣ ಹಾಳಾಗುವ ಸ್ಥಿತಿ ತಲುಪಿವೆ. ಲಕ್ಷಾಂತರ ರೂಪಾಯಿಗಳ ಅನುದಾನದಲ್ಲಿ ಸುಸಜ್ಜಿತ ಕಟ್ಟಡ ಹಾಗೂ ಶೌಚಗೃಹ ನಿರ್ಮಾಣ ಕೈಗೊಂಡಿದ್ದರೂ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ತಾಲೂಕಿನ ಹೂವಿನಶಿಗ್ಲಿ, ಹುರಳಿಕುಪ್ಪಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಹಾಗೂ ಪಟ್ಟಣದ ಸರ್ಕಾರಿ ಶಾಲೆಗಳ ಕೊಠಡಿಗಳು ಸಂಪೂರ್ಣ ದುರಸ್ತಿ ಕಾರ್ಯ ಕೈಗೊಳ್ಳುವುದು ಅವಶ್ಯವಾಗಿದೆ. ಪಟ್ಟಣದ ಎಸಿ ಕಚೇರಿ ಆವರಣದಲ್ಲಿ ಸುಮಾರು 6 ಕೊಠಡಿಗಳು ಖಾಲಿಯಾಗಿವೆ. ಈ ಮೊದಲು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಾಗಿದ್ದ ಈ ಕಟ್ಟಡ ಇಂದು ಅನೈತಿಕ ಕಾರ್ಯ ಚಟುವಟಿಕೆಯ ತಾಣವಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಪಟ್ಟಣ ಸೇರಿದಂತೆ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳ ಕಟ್ಟಡ ದುರಸ್ತಿ ಹಾಗೂ ಹೊಸ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ. ಅವಶ್ಯವಾಗಿರುವ ಶಾಲೆಗಳ ಕಟ್ಟಡ ಹಾಗೂ ಕೊಠಡಿ ದುರಸ್ತಿಗಾಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. | ವಿ.ವಿ. ಸಾಲಿಮಠ, ಬಿಇಒ ಸವಣೂರ ಪಟ್ಟಣದ ಎಸಿ ಕಚೇರಿ ಆವರಣದಲ್ಲಿರುವ ಶಿಕ್ಷಣ ಇಲಾಖೆಗೆ ಸಂಬಂಧಿಸಿರುವ ಕಟ್ಟಡವನ್ನು ನೆಲಸಮಗೊಳಿಸಲು ತೀರ್ವನಿಸಲಾಗಿದೆ. ತಾಲೂಕಿನ ಮಂತ್ರೋಡಿ ಗ್ರಾಮದಲ್ಲಿರುವ ಕಟ್ಟಡ ಬಳಕೆಗಾಗಿ ಶಾಲೆಯ ಶಿಕ್ಷಕರಿಗೆ ತಿಳಿಸಿ, ಸೂಕ್ತ ಕ್ರಮ ವಹಿಸಲಾಗುವುದು. | ಎಂ.ಎನ್. ಅಡಿವೆಪ್ಪನವರ, ಬಿಆರ್ಸಿ