ಕಿಷ್ಕಿಂಧೆಯಂತಾದ ಸರ್ಕಾರಿ ಆಸ್ಪತ್ರೆ

FotoJet (3)
Published on

ಎ.ಅಪ್ಪಾಜಿಗೌಡ ಮುಳಬಾಗಿಲು

ನಗರದ ಜನಸಂಖ್ಯೆ ಕಡಿಮೆ ಇದ್ದಾಗ ನಗರದಲ್ಲಿ ಆರಂಭವಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಹಂತ ಹಂತವಾಗಿ ಮೇಲ್ದರ್ಜೆಗೇರಿದರೂ ಬದಲಿ ಕಟ್ಟಡ ನಿರ್ಮಾಣ ಮಾಡದೆ ಹಳೇ ಕಟ್ಟಡದ ಮೇಲೆಯೇ ಹೊಸ ಕಟ್ಟಡ ನಿಮಾರ್ಣಗೊಂಡು ಇಕ್ಕಟ್ಟಿನಲ್ಲೇ ಆರೋಗ್ಯ ಸೇವೆ ಪಡೆಯುವಂತಾಗಿದೆ.

ಆಸ್ಪತ್ರೆ ಮುಂಭಾಗ ಎಂಸಿ ರಸ್ತೆ ಬದಿ ಆಸ್ಪತ್ರೆಯ ಜಾಗವನ್ನೇ ನಗರಸಭೆಯಿಂದ ಅತಿಕ್ರಮಣ ಮಾಡಿ, ವಾಣಿಜ್ಯ ಮಳಿಗೆ ಕಟ್ಟಿ ಬಾಡಿಗೆ ಪಡೆಯುತ್ತಿದ್ದಾರೆ. ಚಿಕನ್​ ಕಬಾಬ್​ ಸೇರಿ ಹಲವು ಅಂಗಡಿಗಳು ಆಸ್ಪತ್ರೆ ಮುಂಭಾಗ ಕಾರ್ಯನಿರ್ವಹಿಸುವ ಮೂಲಕ ಆಸ್ಪತ್ರೆಯ ಪರಿಸರಕ್ಕೆ ಧಕ್ಕೆ ತಂದಿದ್ದರೂ ಹೇಳೋರು ಕೇಳೋರು ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ವೈದ್ಯರ ಕೊರತೆ ಇಲ್ಲದಿದ್ದರೂ, ಸಿಬ್ಬಂದಿ ಕೊರತೆ ಜೀವಂತವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಾರ್ವಜನಿಕ ಆಸ್ಪತ್ರೆಗೆ ಮೇಲ್ದರ್ಜೆಗೇರಿ 60 ಹಾಸಿಯಿಂದ 100 ಹಾಸಿಗೆ ಆಸ್ಪತ್ರೆಯಾದರೂ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿವೆ.

ಮಂಜೂರಾದ 98 ಹುದ್ದೆಗಳಲ್ಲಿ 54 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 35 ಡಿ ಗ್ರೂಪ್​ ಸಿಬ್ಬಂದಿಯಲ್ಲಿ 25 ಹೊರಗುತ್ತಿಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಉಳಿದಂತೆ ಆರೋಗ್ಯ ಮತ್ತು ವೈದ್ಯಕಿಯ ಸೇವೆಗಳಿಗೆ ಗಂಟೆಗಳ ಕಾಲ ಕ್ಯೂನಲ್ಲೆ ನಿಲ್ಲಬೇಕಾದ ಪರಿಸ್ಥಿತಿ ಇದೆ. ರಕ್ತ, ಮಲಮೂತ್ರ ಇತ್ಯಾದಿ ಪರೀಕ್ಷೆಗಳಿಗೂ ಗಂಟೆಗಟ್ಟಲೇ ಕಾಯಬೇಕಾದ ದುಸ್ಥಿತಿ ಬಂದೊದಗಿದೆ. ಇತ್ತೀಚೆಗೆ ತುರ್ತು ಚಿಕಿತ್ಸಾ ಘಟಕ ಆರಂಭಗೊಂಡಿದ್ದು, ಜತೆಗೆ ಡಯಾಲಿಸಿಸ್​ ಘಟಕಗಳು ಸೇವೆಗಿಂತ ರಿಪೇರಿ ಕಾಣುವುದೆ ಹೆಚ್ಚಾಗಿದೆ.

ಒಪಿಡಿ ಚೀಟಿ ಪಡೆಯುವುದೇ ಸಾಹಸ : ಪ್ರತಿದಿನ ಸರಾಸರಿ 450 ರಿಂದ 500ಕ್ಕೂ ಹೆಚ್ಚಿನ ಹೊರರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಲು ಪರದಾಡುತ್ತಾರೆ. ಅದರಲ್ಲೂ ಸೋಮವಾರದಿಂದ ಬುಧವಾರ ಇನ್ನು ಹೆಚ್ಚಿನ ರೋಗಿಗಳು ಬರುವುದರಿಂದ ಇಲ್ಲಿ ಸೇವೆ ಪಡೆಯಲು ಸಾಧ್ಯವಿಲ್ಲ ಎಂದು ಖಾಸಗಿ ಆಸ್ಪತ್ರೆಗಳಿಗೆ ಕಾಲು ತೆಗೆಯುವುದು ಸರ್ವೇಸಾಮಾನ್ಯ. ಚೀಟಿ ಪಡೆಯಲು ಒಂದು ಗಂಟೆ, ವೈದ್ಯರು ಬಳಿ ತೋರಿಸಲು ಒಂದು ಗಂಟೆಗೂ ಅಧಿಕ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ರೋಗಿಗಳದ್ದಾಗಿದೆ. ಕೂರಲು ಆಸನ ವ್ಯವಸ್ಥೆ ಇಲ್ಲ, ಚೀಟಿ ಪಡೆಯಲು, ವೈದ್ಯರ ಬಳಿ ತೋರಿಸಲು ಟೋಕನ್​ ವ್ಯವಸ್ಥೆ ಇಲ್ಲದೇ ಸರ್ಕಾರಿ ಆಸ್ಪತ್ರೆಯ ಸಹವಾಸವೇ ಬೇಡ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಹೇಳೋರು ಕೇಳೋರೇ ಇಲ್ಲ : ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ದಕ್ಷರನ್ನು ನೇಮಕ ಮಾಡಬೇಕು. ಈ ಹಿಂದೆ ಆಡಳಿತ ವೈದ್ಯಾಧಿಕಾರಿಗಳಾಗಿದ್ದ ಡಾ.ಭಾರತಿ, ಡಾ.ಜಿ.ಎಸ್​. ವೇಣುಗೋಪಾಲ್​ ಅವಧಿಯಲ್ಲಿ ಒಂದಷ್ಟು ಸುಧಾರಣೆಗಳು ಕಂಡಿದ್ದು, ಅವರು ಬದಲಾದ ನಂತರ ಇಲ್ಲಿ ಹೇಳುವರೂ ಇಲ್ಲ ಕೇಳುವರೂ ಇಲ್ಲ ಎಂಬಂತಾಗಿದೆ.

ಆಸ್ಪತ್ರೆಯ ಸ್ಥಳದಲ್ಲಿ ಪುರಸಭೆಯಿಂದ ನಿಮಾರ್ಣ ಗೊಂಡಿರುವ ವಾಣಿಜ್ಯ ಮಳಿಗೆ ಅಂಗಡಿಗಳನ್ನು ತೆರವು ಮಾಡಿ, ಕಟ್ಟಡವನ್ನು ಕೆಡವಲು ನಗರಸಭೆಗೆ ಸೂಚನೆ ನೀಡಲಾಗಿದೆ. ಆಸ್ಪತ್ರೆಯ ವ್ಯವಸ್ಥೆ ಬಿಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು. | ಸಮೃದ್ಧಿ ವಿ.ಮಂಜುನಾಥ್​ ಶಾಸಕ, ಮುಳಬಾಗಿಲು ಆಸ್ಪತ್ರೆಗೆ ಸ್ಥಳಾವಕಾಶದ ಕೊರತೆ ಇದ್ದು, ಹಳೇ ಕಟ್ಟಡದ ಮೇಲೆ ಹೊಸ ಕಟ್ಟಡ ಕಟ್ಟಿರುವುದರಿಂದ ವ್ಯವಸ್ಥೆ ಸರಿಪಡಿಸಲು ಕಷ್ಟ ಸಾಧ್ಯವಾಗಿದೆ. ಆದರೂ ಇರುವ ವ್ಯವಸ್ಥೆಯಲ್ಲಿ ಉತ್ತಮ ಸೇವೆ ನೀಡಲಾಗುತ್ತಿದೆ. | ಡಾ. ಸುರೇಂದ್ರ ಆಸ್ಪತ್ರೆ ಆಡಳಿತ ಮುಖ್ಯ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ ಮುಳಬಾಗಿಲು ಆಸ್ಪತ್ರೆಯಲ್ಲಿ ಸೇವೆ ಪಡೆಯುವುದೇ ಸಾಹಸದ ಕೆಲಸವಾಗಿದೆ. ಹೊರರೋಗಿಗಳ ಚೀಟಿ ಪಡೆಯುವುದು, ನಂತರ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಸರತಿಯಲ್ಲಿ ನಿಲ್ಲುವುದು ಕಷ್ಟವಾಗಿದೆ. ಸಂಜೆ ವೇಳೆ ಬರುವ ರೋಗಿಗಳಿಗೆ ವೈದ್ಯರು ಮತ್ತು ಸಿಬ್ಬಂದಿ ಮನೆಗಳಿಗೆ ತೆರಳುವ ತರಾತುರಿಯಲ್ಲಿ ಇರುತ್ತಾರೆ. ಪರೀಕ್ಷೆಗಳು ಮತ್ತಿತರ ತಪಾಸಣೆಗಳಿದ್ದರೆ ಎರಡು ಮೂರು ದಿನ ಕಾಯಬೇಕು. | ಕೆ.ಎ. ಭೀಮಯ್ಯ ಮುಳಬಾಗಿಲು ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net