

ಸಕಲೇಶಪುರ: ರಾಜ್ಯ ಸರ್ಕಾರದ ಉಚಿತ ಯೋಜನೆಗಳು ಹೇಳಿಕೆಗೆ ಮಾತ್ರ ಸೀಮಿತಗೊಂಡಿದೆ ಎಂದು ಶಾಸಕ ಸೀಮೆಂಟ್ ಮಂಜು ಆರೋಪಿಸಿದರು.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಅವರಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಖಾತೆಗೆ ಎರಡು ಸಾವಿರ ರೂ.ಹಾಕುವುದಾಗಿ ಘೋಷಣೆ ಮಾಡಿದ್ದ ಸರ್ಕಾರ ಇದೀಗ ಅದರಲ್ಲಿ ವಿಫಲವಾಗಿದೆ. ಹಸಿರು ಕಾರ್ಡ್‌ದಾರರಿಗೆ ಹಣ ನೀಡುವ ಘೋಷಣೆ ಜಾರಿಯಾಗಿಲ್ಲ. ಇದರಿಂದಾಗಿ ರಾಜ್ಯದ ಜನತೆ ಬೇಸತ್ತಿದ್ದಾರೆ. ದೈನಂದಿಗೆ ವಸ್ತುಗಳ ಬೆಲೆಯನ್ನು ಗಗನಕ್ಕೆರಿಸುವ ಮೂಲಕ ಜನರನ್ನು ಸುಲಿಗೆ ಮಾಡುತ್ತಿರುವ ಸರ್ಕಾರ, ಇದರಿಂದ ಬಂದ ಆದಾಯವನ್ನು ವಿವಿಧ ರಾಜ್ಯದಲ್ಲಿ ನಡೆಯುವ ಚುನಾವಣೆ ವೆಚ್ಚಕ್ಕಾಗಿ ಬಳಸುತ್ತಿದೆ. ಇದರಿಂದಾಗಿ ರಾಜ್ಯ ಅಭಿವೃದ್ಧಿ ಸಂಪೂರ್ಣ ನೆಲಕಚ್ಚಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸಂಗ್ರಹವಾಗುವ ಸಂಪನ್ಮೂಲವನ್ನು ಕಾಂಗ್ರೆಸ್‌ಸ್ ಬಲವರ್ಧನೆಗಾಗಿ ಹಾಗೂ ಚುನಾವಣೆ ಎದುರಿಸಲು ಬಳಲಾಗುತ್ತಿದೆ. ಇದಕ್ಕೆ ಜೀವಂತ ಉದಾಹರಣೆ ಐಟಿ ಅಧಿಕಾರಿಗಳ ದಾಳೆ ವೇಳೆ ಸಿಕ್ಕ ಹಣ. ಇದೊಂದು ಬಹುಜನ ವಿರೋಧಿ ಸರ್ಕಾರವಾಗಿದ್ದು, ಇದರ ವಿರುದ್ಧ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಬಿಜೆಪಿ ಹಿರಿಯ ಮುಖಂಡರಾದ ದೇವಾಲದಕೆರೆ ರಾಮಚಂದ್ರೆಗೌಡ, ಎಂ.ಎಂ ವೆಂಕಟೇಶ್, ಮಂಜುನಾಥ್ ಸಂಘಿ, ರಾಜ್‌ಕುಮಾರ್, ಅಶ್ವಥ್,ನರೇಶ್ ಮುಂತಾದವರಿದ್ದರು.