

ರಾಯಚೂರು: ವ್ಯಕ್ತಿತ್ವ ವ್ಯಕ್ತಿಯ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಉತ್ತಮ ಸಂಸ್ಕಾರದಿಂದ ಮಾತ್ರ ಉತ್ತಮ ವ್ಯಕ್ತಿತ್ವ ಗಳಿಸಿಕೊಳ್ಳಲು ಸಾಧ್ಯವಿದೆ ಎಂದು ಬೆಂಗಳೂರಿನ ಆಪ್ತ ಸಲಹೆಗಾರತಿ ಡಾ.ವಿದ್ಯಾ ಕಸ್ಬೆ ಹೇಳಿದರು.
ಸ್ಥಳೀಯ ಎಸ್‌ಎಸ್‌ಆರ್‌ಜಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಜೀವನಾಧರಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಕ್ತಿತ್ವ ರೂಪಿಸುವಲ್ಲಿ ಅನುವಂಶೀಯತೆ, ದೈಹಿಕ ರಚನೆ, ಕೌಟುಂಬಿಕ ಪರಿಸರ, ಆಹಾರ ವಿಧಾನಗಳು ಕಾರಣವಾಗುತ್ತವೆ ಎಂದರು.
ವ್ಯಕ್ತಿ ಸರ್ವತೋಮುಖ ಬೆಳವಣಿಗೆಗೆ ಶಾರೀರಿಕ ಶಕ್ತಿ, ಬೌದ್ಧಿಕ ಶಕ್ತಿ, ನೈತಿಕ ಶಕ್ತಿ, ಆಧ್ಯಾತ್ಮಿಕ ಶಕ್ತಿಗಳನ್ನು ಅಭಿವೃದ್ಧಿ ಪಡಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ಬೆಳೆಸಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳಿಗೆ ಜೀವನಾಧರಿತ ಕೌಶಲ್ಯ ಬಹು ಮುಖ್ಯವಾಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ, ಸಕಾರಾತ್ಮಕ ಚಿಂತನೆಗಳು ಬೆಳೆಯುತ್ತವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ.ಬಸಪ್ಪ ತಿಪ್ಪಾರೆಡ್ಡಿ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ವಿದ್ಯಾರ್ಥಿಗಳಲ್ಲಿ ವಿಪರೀತ ಒತ್ತಡವನ್ನು ಕಾಣುತ್ತಿದ್ದೇವೆ. ವಿದ್ಯಾರ್ಥಿಗಳು ಅಧ್ಯಯನದ ಜತೆಗೆ ವ್ಯಾಯಾಮ, ಯೋಗ, ಧ್ಯಾನಗಳನ್ನು ರೂಢಿಸಿಕೊಂಡು ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯ ಎಸ್.ಅಮರೇಗೌಡ, ಆಡಳಿತ ಮಂಡಳಿ ಸದಸ್ಯೆ ಜಾನಕಿ ಪುರೋಹಿತ, ಉಪನ್ಯಾಸಕರಾದ ಗೌರಿ ಪಲ್ಲಕ್ಕಿ, ತ್ರೀವೇಣಿ, ಡಾ.ರಾಜೇಶ್ವರಿ ಹಾಗೂ ಕಾಲೇಜು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.