

ಹೊಳಲ್ಕೆರೆ: ಮಾನವ ಜನ್ಮ ಅತ್ಯಂತ ಶ್ರೇಷ್ಠ. ಈ ಜೀವಿತಾವಧಿಯಲ್ಲಿ ಉತ್ತಮ ಕೆಲಸ ಕೈಗೊಂಡರೆ ಜೀವನ ಸಾರ್ಥಕ ಆಗಲಿದೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲೂಕಿನ ಲೋಕದೊಳಲು ಗ್ರಾಮದಲ್ಲಿ ದೊಡ್ಡಹೊಟ್ಟೆ ರಂಗನಾಥಸ್ವಾಮಿ ಬೆಟ್ಟದ ಮೇಲಿನ ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಎಷ್ಟೇ ಹಣ, ಆಸ್ತಿ ಸಂಪಾದಿಸಿದರೂ ನೆಮ್ಮದಿಗೆ ಬೇಕು ದೈವ ಕೃಪೆ ಎಂದರು.
ದಿನೇ ದಿನೆ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದ ಮೆಟ್ಟಿಲು ನಿರ್ಮಾಣಕ್ಕೆ ಮೂರು ಕೋಟಿ ರೂ. ಮಂಜೂರು ಮಾಡಲಾಗಿದ್ದು, ಈ ಕಾರ್ಯ ಬಹುದೊಡ್ಡ ಸವಾಲು. ಚಿಕ್ಕಂದವಾಡಿ ಗುತ್ತಿಗೆದಾರ ರಾಜಣ್ಣ ಈ ಕಾಮಗಾರಿಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ದೇವರ ಕೃಪೆಯಿಂದ ಶೀಘ್ರ ಪೂರ್ಣಗೊಳ್ಳಲಿ ಎಂದು ಹೇಳಿದರು.
ಗ್ರಾಮಸ್ಥರು ಐದು ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದ್ದೀರಾ. ಆದರೆ, ಅದು ಕಷ್ಟದ ಕೆಲಸ. ನಮ್ಮ ಶಕ್ತಾನುಸಾರ ಯೋಜನೆ ರೂಪಿಸಬೇಕು. ಸರ್ಕಾರದ ಅನುದಾನದ ಜತೆಗೆ ವೈಯಕ್ತಿಕವಾಗಿ ದೇಣಿಗೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್, ಗೌರವಾಧ್ಯಕ್ಷ ಟಿ.ತಿಮ್ಮಪ್ಪ, ಮುಖಂಡರಾದ ಗವಿರಂಗಪ್ಪ, ಕುಮಾರಪ್ಪ, ತಿಪ್ಪೇಸ್ವಾಮಿ, ಉಮೇಶ್, ರಂಗಸ್ವಾಮಿ, ತಿಮ್ಮೇಶ್, ಕೃಷ್ಣಮೂರ್ತಿ, ಗಿರೀಶ್, ತ್ಯಾಗರಾಜ ಇತರರಿದ್ದರು.