ಉತ್ತಮ ಹವ್ಯಾಸ ಸರ್ವತೋಮುಖ ಅಭಿವೃದ್ಧಿಗೆ ಪೂರಕ

19 Dwd 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿ ಜೀವನದ ಕ್ಷಣಗಳು ಅತಿ ಅಮೂಲ್ಯ. ಕಲಿಯಬೇಕೆಂಬ ಹಂಬಲ ವಿದ್ಯಾರ್ಥಿಗಳಲ್ಲಿ ಇದ್ದರೆ ಸಾಽಸುವ ಛಲ ಬೆಳೆಯುತ್ತದೆ. ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ಹವ್ಯಾಸ, ಕಲಿಯುವ ಸಂಸ್ಥೆ, ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಜೆಎಸ್‌ಎಸ್ ಕಾರ್ಯಾಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ನಗರದ ವಿದ್ಯಾಗಿರಿ ಜನತಾ ಶಿಕ್ಷಣ ಸಮಿತಿಯಲ್ಲಿ ಬುಧವಾರ ಆಯೋಜಿದ್ದ ಜೆಇಇ ಮೇನ್ಸ್ನಲ್ಲಿ ಉತ್ತಮ ಅಂಕ ಗಳಿಸಿದ ಆರ್.ಎಸ್. ಹುಕ್ಕೇರಿಕರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನೈತಿಕ ತಳಹದಿಯ ಮೇಲೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಜೆಎಸ್‌ಎಸ್ ಸಂಸ್ಥೆಯ ಹೆಗ್ಗುರುತು. ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಪಾಲಕರ ಹಾಗೂ ಶಿಕ್ಷಕರ ಪರಿಶ್ರಮವೂ ಅಡಗಿದೆ. ಪದವಿ ಪೂರ್ವ ಶಿಕ್ಷಣವು ಉನ್ನತ ಶಿಕ್ಷಣದ ಭವಿಷ್ಯವನ್ನು ನಿರ್ಮಿಸುತ್ತದೆ. ಜೆಇಇ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತರ ಕರ್ನಾಟಕದಲ್ಲೇ ಅತ್ಯುತ್ತಮ ಫಲಿತಾಂಶ ಪಡೆದಿರುವುದು ಶಿಕ್ಷಕರ ಪರಿಶ್ರಮ, ವಿದ್ಯಾರ್ಥಿಗಳ ನಿರಂತರ ಅಧ್ಯಯನಕ್ಕೆ ಸಿಕ್ಕ ಪ್ರತಿಫಲ ಎಂದರು.

ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಮಾತನಾಡಿ, ಪದವಿ ಪೂರ್ವ ಪರೀಕ್ಷೆ ಅಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆ.ಇ.ಇ, ಸಿ.ಇ.ಟಿ, ನೀಟ್‌ಗಳಲ್ಲಿ ಹುಕ್ಕೇರಿಕರ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈಯುತ್ತಿದ್ದಾರೆ. ಉತ್ತಮ ಕಲಿಕಾ ವಾತಾವರಣ, ಅತ್ಯುನ್ನತ ಪ್ರಯೋಗಾಲಯಗಳು, ಗ್ರಂಥಾಲಯಗಳು ವಿದ್ಯಾರ್ಥಿಗಳ ಓದಿಗೆ ಪೂರಕವಾಗಿವೆ ಎಂದರು.

ಮಹಾವೀರ ಉಪಾಧ್ಯೆ ನಿರೂಪಿಸಿದರು. ಡಾ. ಸೂರಜ್ ಜೈನ್ ವಂದಿಸಿದರು. ಜೆಎಸ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net