

ಹಿರೀಸಾವೆ: ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಯುಗಾದಿ ಹಬ್ಬ ಹಾಗೂ ಹೊಸಾ ಸಂವತ್ಸರದ ಪ್ರಯುಕ್ತ ಸಾಂಪ್ರದಾಯಿಕವಾಗಿ ಹೊನ್ನಾರು ಕಟ್ಟುವ ಮೂಲಕ ಕೃಷಿ ಚಟುವಟಿಕೆಗೆ ಮಂಗಳವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಕಬ್ಬಳಿ, ಪುರ, ಪಿ.ಹೊಸಹಳ್ಳಿ, ಬಾಳಗಂಚಿ, ಹೊಸೂರು, ನಾಗನಹಳ್ಳಿ, ಹೆಗ್ಗಡಿಹಳ್ಳಿ, ಬೂವನಹಳ್ಳಿ, ಸಂತೇಶಿವರ, ಯಾವನಘಟ್ಟ ಹಾಗೂ ಹಿರೀಸಾವೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹೊನ್ನಾರು ಉತ್ಸವವು ವೈಭವದಿಂದ ನಡೆಯಿತು.
ಯುಗಾದಿ ಹಬ್ಬದ ಪ್ರಯುಕ್ತ ಪ್ರತಿ ಮನೆಗಳ ಬಾಗಿಲಿಗೆ ಮಾವು ಹಾಗೂ ಬೇವಿನ ಸೊಪ್ಪಿನ ತಳಿರು ತೋರಣ ಕಟ್ಟಲಾಗಿತ್ತು. ಪುರುಷರು ಎಣ್ಣೆ ಸ್ನಾನ ಮಾಡಿ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬೇವು-ಬೆಲ್ಲ ಸವಿದರು. ಇನ್ನು ಮನೆಗಳಲ್ಲಿ ಬೇವು-ಬೆಲ್ಲದ ಪ್ರಸಾದ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಿ ವಿಶೇಷ ಪೂಜೆ ಸಲ್ಲಸಿದರು. ಸಿಹಿ ಊಟ ಮಾಡಿದ ಬಳಿಕ ಗ್ರಾಮದ ಜನತೆಯು ದೇಗುಲಗಳ ಬಳಿಯಿಂದ ಪ್ರಾರಂಭವಾಗುವ ಹೊನ್ನಾರು ಉತ್ಸವ ಪೂಜೆಯಲ್ಲಿ ಪಾಲ್ಗೊಂಡರು.
ಹೊನ್ನಾರು ಉತ್ಸವ: ಜೋಡಿ ಎತ್ತುಗಳ ಮೈ ತೊಳೆದು ವಿಶೇಷವಾಗಿ ಅಲಂಕರಿಸಲಾಗುವುದು. ಮಂಗಳವಾದ್ಯದೊಂದಿಗೆ ಹೊನ್ನಾರು ಉತ್ಸವ ಪ್ರಾರಂಭವಾಗುತ್ತದೆ. ಮರದ ನೇಗಿಲಲ್ಲಿ ಉಳುತ್ತ ಸಾಗಿದಂತೆಲ್ಲ ಹೆಣ್ಣು ಮಕ್ಕಳು ಅಲ್ಲಲ್ಲಿ ಹೊನ್ನಾರು ಉತ್ಸವಕ್ಕೆ ಪೂಜೆ ಸಲ್ಲಿಸಿದರು. ಗ್ರಾಮದ ಸುತ್ತ ಒಂದು ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ಊರ ಹೆಬ್ಬಾಗಿಲಿಗೆ ವಿಷೇಶ ಪೂಜೆ ಸಲ್ಲಿಸಲಾಯಿತು.
ಮಳೆ-ಬೆಳೆಗಾಗಿ ಬೇಡಿಕೆ: ಜಾನುವಾರುಗಳ ಆರೋಗ್ಯ ವೃದ್ಧಿಯಾಗಲಿ, ಉತ್ತಮವಾಗಿ ಮಳೆ ಸುರಿದು ಬಿತ್ತಿದ ಎಲ್ಲ ಬೆಳೆಗಳು ಉಜ್ವಲವಾಗಿ ಬೆಳೆದು ಹೆಚ್ಚು ಫಸಲಿನೊಂದಿಗೆ ರೈತನ ಕೈಸೇರಲಿ ಎಂದು ಗ್ರಾಮದ ಮಹಿಳೆಯರು ಹೊನ್ನಾರು ಉತ್ಸವವಕ್ಕೆ ವಿಶೇಷ ಪೂಜೆ ಸಲ್ಲಿಸಿ ಬೇಡಿಕೊಂಡರು.