

ಚಿತ್ರದುರ್ಗ: ನಗರದ ಸಾವಂತನಹಟ್ಟಿಯ ಧರ್ಮದೇವತೆ, ಜಾತಮ್ಮ, ಹಟ್ಟಿಮಾರಮ್ಮ ದೇವಿ ಹಾಗೂ ಮೈಲಾರಲಿಂಗೇಶ್ವರ
ಸ್ವಾಮಿಯ ಜಾತ್ರಾ ಮಹೋತ್ಸವವೂ ಮಂಗಳವಾರ ನೂರಾರು ಭಕ್ತರ ಸಮ್ಮುಖದಲ್ಲಿ ವೈಭವೋಪೇತವಾಗಿ ನೆರವೇರಿತು.
ಜಾತ್ರೆ ಅಂಗವಾಗಿ ಶಕ್ತಿದೇವತೆಗಳ ಉತ್ಸವ ಮೂರ್ತಿಗಳನ್ನು ಭಕ್ತರ ಕಣ್ಮನ ಸೆಳೆಯುವಂತೆ ವಿವಿಧ ಬಗೆಯ ಪುಷ್ಪಗಳಿಂದ ಅರ್ಚಕರು ಅಲಂಕರಿಸಿದ ನಂತರ ಟ್ರ್ಯಾಕ್ಟರ್‌ನಲ್ಲಿ ಪ್ರತಿಷ್ಠಾಪಿಸಲಾಯಿತು. ರಾಜಬೀದಿಗಳಲ್ಲಿ ಸಂಚರಿಸಿದ ಅದ್ದೂರಿ ಮೆರವಣಿಗೆಯೂ ಭಕ್ತರ
ಉಧೋ ಉಧೋ ಎಂಬ ಹರ್ಷೋದ್ಘಾರದೊಂದಿಗೆ ಸಾಗಿತು.
ಮೈಲಾರಲಿಂಗೇಶ್ವರ ದೇಗುಲದಿಂದ ಆರಂಭವಾದ ಮೆರವಣಿಗೆ ಬುರುಜನಹಟ್ಟಿ, ಸಂಗೊಳ್ಳಿ ರಾಯಣ್ಣ ವೃತ್ತ, ಹೊಳಲ್ಕೆರೆ ರಸ್ತೆ, ಗಾಂಧಿ ಸರ್ಕಲ್ ಮಾರ್ಗವಾಗಿ ಸಂಚರಿಸಿತು. ನಂತರ ಐತಿಹಾಸಿಕ ಸಂತೆಹೊಂಡದಲ್ಲಿ ಗಂಗಾಪೂಜೆ ಸ್ವೀಕರಿಸಿ, ಬನ್ನಿ ಮಹಾಕಾಳಮ್ಮ ದೇಗುಲದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಿತು. ಗುಡಿದುಂಬುವ ವೇಳೆಯೂ ಭಕ್ತರ ಉತ್ಸಾಹ ಮುಗಿಲುಮುಟ್ಟಿತ್ತು.
ದೇವರ ದರ್ಶನಕ್ಕಾಗಿ ಆಗಮಿಸಿದ್ದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡು ಯುವಸಮೂಹವನ್ನು ಹುರಿದುಂಬಿಸಿದರು. ಕರಡಿ ಚಮ್ಮಾಳ, ಡೊಳ್ಳು, ಉರುಮೆ ಸೇರಿ ಇತರೆ ಜನಪದ ಕಲಾತಂಡಗಳು ಮೆರುಗು ನೀಡಿದವು. ಹಲವರು ಕುಣಿದು ಕುಪ್ಪಳಿಸಿದರು.