

ಪುರುಷೋತ್ತಮ ಪೆರ್ಲ ಕಾಸರಗೋಡು
ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಪೆರ್ಲ&ಸೂರಂಬೈಲ್ ರಸ್ತೆ ದಿನದಿಂದ ದಿನಕ್ಕೆ ಶೋಚನೀಯ ಸ್ಥಿತಿಗೆ ತಲುಪುತ್ತಿದ್ದರೂ, ಇಲಾಖೆ ಅಧಿಕಾರಿಗಳು ಕಣ್ಣು ತೆರೆಯುತ್ತಿಲ್ಲ. ಪೆರ್ಲದಿಂದ ಕನ್ನಟಿಕಾನ, ಕೋಟೆ, ಸೈಪಂಗಲ್ಲು, ಗಾಳಿಗೋಪುರ, ಸ್ವರ್ಗ ಪ್ರದೇಶದಲ್ಲಿ ಅಭಿವೃದ್ಧಿಕಾರ್ಯ ಮರೀಚಿಕೆಯಾಗಿದ್ದು, ಪ್ರಸಕ್ತ ಈ ಹಾದಿಯಲ್ಲಿ ಪ್ರಯಾಣ ಭೀತಿಗೆ ಕಾರಣವಾಗುತ್ತಿದೆ. ಅಡ್ಕಸ್ಥಳ, ಪೆರ್ಲ ಭಾಗದಿಂದ ದಿನವೊಂದಕ್ಕೆ ನೂರಾರು ಮಂದಿ ವಿದ್ಯಾರ್ಥಿಗಳು ವಾಣಿನಗರ, ಬೆಟ್ಟಂಪಾಡಿ ಸೇರಿದಂತೆ ವಿವಿಧೆಡೆ ವಿದ್ಯಾರ್ಜನೆಗೆ ತೆರಳುತ್ತಿದ್ದರೆ, ಕೇರಳ&ಕರ್ನಾಟಕದ ವಿವಿಧ ಕಚೇರಿಗಳಿಗೆ ಹಲವು ಮಂದಿ ಇದೇ ಹಾದಿಯಾಗಿ ತೆರಳುತ್ತಿದ್ದು, ಕಿರಿದಾದ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆಯಿದೆ.
ಇಲಾಖೆ ರ್ನಿಲಕ್ಷ್ಯ:
ರಸ್ತೆಹಾದು ಹೋಗುವ ಈ ಪ್ರದೇಶದಲ್ಲಿ ಬಹುತೇಕ ಜಾಗ ಕೇರಳ ತೋಟಗಾರಿಕಾ ನಿಗಮ(ಪಿಸಿಕೆ)ಕ್ಕೆ ಸೇರಿದೆ. ಈ ಜಾಗ ವಶಪಡಿಸಿ, ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಮುಂದಾಗದ ಲೋಕೋಪಯೋಗಿ ಇಲಾಖೆ ವಿರುದ್ಧ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ವರ್ಕಾಡಿ ಪಂಚಾಯಿತಿಯ ನಂದಾರಪದವಿನಿಂದ ತಿರುವನಂತಪುರ ವರೆಗೆ ನಿರ್ಮಾಣಹಂತದಲ್ಲಿರುವ ಮಲೆನಾಡು ಹೆದ್ದಾರಿ ಇದೇ ಹಾದಿಯಾಗಿ ಸಂಚರಿಸಬೇಕಾಗಿದ್ದರೂ, ಇಲ್ಲಿನ ರಸ್ತೆಗೆ ಅಗತ್ಯವಿರುವ ಜಾಗ ಬಿಟ್ಟುಕೊಡುವ ವಿಚಾರದಲ್ಲಿ ಪಿಸಿಕೆ ರ್ನಿಲಕ್ಷ್ಯ ವಹಿಸಿರುವುದರಿಂದ ರಸ್ತೆ ಹಾದುಹೋಗುವ ಪಥವನ್ನೇ ಬದಲಾಯಿಸಿರುವುದಾಗಿ ಮಾಹಿತಿಯಿದೆ. ಪಿಸಿಕೆ ಜಾಗ ಬಿಟ್ಟುಕೊಡಲು ಹಿಂದೇಟು ಹಾಕುತ್ತಿರುವುದರಿಂದ ಈ ಪ್ರದೇಶದಲ್ಲಿರುವ ಖಾಸಗಿ ವ್ಯಕ್ತಿಗಳೂ ರಸ್ತೆಗೆ ಜಾಗಬಿಟ್ಟಿಕೊಡಲು ಮುಂದಾಗುತ್ತಿಲ್ಲ. ಇದರಿಂದಾಗಿ ಕಳೆದ ಮೂರು ದಶಕಗಳಿಂದ ಪೆರ್ಲ&ಸ್ವರ್ಗ ರಸ್ತೆ ಶೋಚನೀಯಾವಸ್ಥೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಜಿಲ್ಲೆಯ ಬಹುತೇಕ ರಸ್ತೆಗಳು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರೆ, ಪೆರ್ಲ&ಸ್ವರ್ಗ ರಸ್ತೆಯಲ್ಲಿ ಮಾತ್ರ ನರಕಯಾತನೆ ಕಡಿಮೆಯಾಗುತ್ತಿಲ್ಲ. ಜಿಲ್ಲೆಯ ಸಂಸದ, ಮಂಜೇಶ್ವರ ಶಾಸಕರು ಪ್ರತಿ ಬಾರಿ ಹೇಳಿಕೆ ನೀಡುವುದು ಬಿಟ್ಟರೆ, ಇಲ್ಲಿನ ಜನತೆಯ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂಬುದಾಗಿ ಇಲ್ಲಿನ ನಿವಾಸಿಗಳು ಅಳಲು ವ್ಯಕ್ತಪಡಿಸುತ್ತಾರೆ.
ಜನರು ಕೂಗು ಅರಣ್ಯರೋದನ:
ಒಂದೆಡೆ ಕಡಿದಾದ ತಿರುವು, ಇನ್ನೊಂದೆಡೆ ಯಾವುದೇ ಸಮಯದಲ್ಲೂ ಕುಸಿದು ಬೀಳುವ ಸ್ಥಿತಿಯಲ್ಲಿ ಬೆಟ್ಟ ಪ್ರದೇಶದಿಂದ ರಸ್ತೆಗೆ ವಾಲಿನಿಂತ ಬೃಹತ್ ಮರಗಳು, ಶಿಥಿಲಾವಸ್ಥೆಯಲ್ಲಿರುವ ಕಿರು ಸೇತುವೆ ಸ್ವರ್ಗದ ಹಾದಿಯನ್ನೇ ನರಕಸದೃಶಗೊಳಿಸಿದೆ. ಪೆರ್ಲದಿಂದ ಸ್ವರ್ಗ ಹಾದಿಯಾಗಿ ಸೂರಂಬೈಲ್ ವರೆಗಿನ 5.8ಕಿ.ಮೀ ಉದ್ದದ ಈ ರಸ್ತೆ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹಾದಿಯಾಗಿದ್ದು, ರಸ್ತೆ ಅಭಿವೃದ್ಧಿಗಾಗಿ ನಾಗರಿಕರ ಬೇಡಿಕೆ ಅರಣ್ಯರೋದನವಾಗುತ್ತಿದೆ.
ಕಿರು ಸೇತುವೆ ಶಿಥಿಲ:
ಸ್ವರ್ಗದ ಕಿರು ಸೇತುವೆ ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿದೆ. ರಸ್ತೆ ತೆರಿಗೆ ಹೆಸರಲ್ಲಿ ಕೋಟ್ಯಂತರ ರೂ. ಸಂಗ್ರಹಿಸುವ ಸರ್ಕಾರ ಮೂಲಸೌಕರ್ಯ ಒದಗಿಸಿಕೊಡಲು ಹಿಂದೇಟು ಹಾಕುವ ಮೂಲಕ ಜನತೆಗೆ ದ್ರೋಹ ಬಗೆಯುತ್ತಿದೆ. ಕನ್ನಟಿಕಾನ, ಗಾಳಿಗೋಪುರ ಪ್ರದೇಶದಲ್ಲಿ ಈ ಹಿಂದೆ ನಡೆದಿರುವ ರಸ್ತೆ ಅಪಘಾತಗಳಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಕಡಿದಾದ ತಿರುವು, ಅಗಲ ಕಿರಿದಾದ ರಸ್ತೆಯಿಂದ ಕನ್ನಟಿಕಾನ ಇಳಿಜಾರು ಪ್ರದೇಶದಲ್ಲಿ ಅಪಘಾತ ಸಾಮಾನ್ಯವಾಗುತ್ತಿದೆ. ಈ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿಪಡಿಸುವುದಿದ್ದರೆ, ಜಾಗ ಬಿಟ್ಟುಕೊಡಲು ತಯಾರಿರುವುದಾಗಿ ಸ್ಥಳಿಯ ನಿವಾಸಿ ನಾರಾಯಣ ಭಟ್ ತಿಳಿಸುತ್ತಾರೆ. ಪ್ರಸಕ್ತ ರಸ್ತೆಯಲ್ಲಿ ದ್ವಿಚಕ್ರ ಸೇರಿದಂತೆ ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ಸಾಗುವ ಪರಿಸ್ಥಿತಿಯಿದೆ. ಪ್ರತಿದಿನ ಹತ್ತಕ್ಕೂ ಹೆಚ್ಚು ಖಾಸಗಿ ಬಸ್ಗಳು ಪೆರ್ಲ&ಸ್ವರ್ಗ ಹಾದಿಯಾಗಿ ಪುತ್ತೂರು ಹಾಗೂ ವಾಣೀನಗರಕ್ಕೆ ಸಂಚಾರ ನಡೆಸುತ್ತಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ಶಾಲಾ ಕಾಲೇಜು ತೆರಳುವ ನೂರಾರು ವಿದ್ಯಾರ್ಥಿಗಳು ಈ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದಾರೆ.
ಪೆರ್ಲ&ಸೂರಂಬೈಲ್ ರಸ್ತೆ ಅಭಿವೃದ್ಧಿಗೆ ಬಹುತೇಕ ಕಡೆ ಖಾಸಗಿ ಜಾಗ ಅಡಚಣೆಯಾಗುತ್ತಿದೆ. ಇದರಿಂದ ಇದ್ದ ರಸ್ತೆಯನ್ನು ಯಥಾಸ್ಥಿತಿಯಲ್ಲಿ ದುರಸ್ತಿ ನಡೆಸಿಕೊಂಡು ಸಾಗಬೇಕಾಗುತ್ತಿದೆ. ರಸ್ತೆಗೆ ಚಾಚಿರುವ ಮರಗಳು ಖಾಸಗಿ ಸ್ಥಳದಲ್ಲಿರುವುದರಿಂದ ಇವುಗಳನ್ನು ತೆರವುಗೊಳಿಸುವ ಬಗ್ಗೆ ಸಂಬಂಧಪಟ್ಟವರಲ್ಲಿ ಮಾತುಕತೆ ನಡೆಸಲಾಗುವುದು. | ವಿಮಲಾ, ಸಹಾಯಕ ಅಭಿಯಂತೆ, ಲೋಕೋಪಯೋಗಿ ರಸ್ತೆ ವಿಭಾಗ