ಕುಡಿಯುವ ನೀರು ತುಂಬಿದ್ದ ಹಂಡೆಯಲ್ಲಿ ಬಿದ್ದು ಬಾಲಕಿ ಸಾವು

Published on

ನರಗುಂದ: ಆಟವಾಡಲು ಹೋಗಿದ್ದ ಎರಡು ವರ್ಷದ ಕಂದಮ್ಮ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಪಟ್ಟಣದ ದಂಡಾಪುರ ಬಡಾವಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕಾವ್ಯಾ ಫಕೀರಪ್ಪ (2) ಮೃತ ಬಾಲಕಿ. ಕೃಷಿ ಕೆಲಸ ಮಾಡುವ ಫಕೀರಪ್ಪ ಕುಟುಂಬ ಸುಮಾರು ವರ್ಷಗಳಿಂದ ಜಮೀನಿನಲ್ಲಿಯೇ ವಾಸವಾಗಿದ್ದರು. ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಹಳ್ಳದ ನೀರನ್ನು ಹಂಡೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಎಂದಿನಂತೆ ಮನೆ ಮುಂದಿನ ಛಾವಣಿ ನೆರಳಿನಲ್ಲಿದ್ದ ಹಂಡೆಯಲ್ಲಿ ಶನಿವಾರ ನೀರು ತುಂಬಿಸಿದ್ದರು. ಫಕೀರಪ್ಪ ಹಾಗೂ ಆತನ ಪತ್ನಿ ಮನೆಯೊಳಗೆ ಕುಳಿತಿದ್ದಾಗ ಆಟವಾಡುವ ನೆಪದಲ್ಲಿ ಹೊರಗೆ ಬಂದಿದ್ದ ಬಾಲಕಿ ಕಾವ್ಯ ಹಂಡೆಯಲ್ಲಿ ತಲೆಕೆಳಗಾಗಿ ಬಿದ್ದಿದ್ದಾಳೆ. ಬಾಲಕಿ ಕೈಕಾಲು ಬಡಿದುಕೊಂಡರೂ ಹಂಡೆಯಲ್ಲಿ ನೀರು ಭರ್ತಿಯಾಗಿದ್ದರಿಂದ ಬದುಕಿ ಉಳಿಯಲಿಲ್ಲ. ಪರಿಸ್ಥಿತಿ ಕೈಮೀರಿದ ಬಳಿಕ ನೀರಿಗೆ ಬಿದ್ದ ಬಾಲಕಿಯನ್ನು ಆಕೆಯ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನಕ್ಕೆ ಆಗಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net