ಸೂಚನಾ ಫಲಕದಲ್ಲಿ ವಿವರ ಪ್ರಕಟಿಸಿದ ನಂತರ ಶುಲ್ಕ ಪಡೆಯಿರಿ: ರಾಜ್ಯದ ಖಾಸಗಿ ಶಾಲೆಗಳಿಗೆ ಸೂಚನೆ

school notice borad
Published on

ಬೆಂಗಳೂರು: ರಾಜ್ಯದ ಎಲ್ಲ ಖಾಸಗಿ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷದ ಶುಲ್ಕಗಳನ್ನು ಪ್ರತಿ ವರ್ಷ ಡಿಸೆಂಬರ್​ ಅಂತ್ಯದೊಳಗೆ ಶಾಲೆಯ ಸೂಚನಾ ಫಲಕ ಹಾಗೂ ಇಲಾಖಾ ವೆಬ್​ಸೈಟ್​ನಲ್ಲಿ ಪ್ರಕಟಿಸಿ ಅದರಂತೆ ಶುಲ್ಕವನ್ನು ಪಡೆಯಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದೆ.

ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಒಂದೇ ಮಾನದಂಡದ ರೂಪದಲ್ಲಿ ಬೋಧನಾ ಶುಲ್ಕ ಹಾಗೂ ಇತರ ಶುಲ್ಕಗಳನ್ನು ಲೆಕ್ಕಾಚಾರ ಮಾಡಿ ಪಡೆದುಕೊಳ್ಳಲು ಹೈಕೋರ್ಟ್​ ನಿರ್ದೇಶನ ನೀಡಿದೆ. ಆ ಪ್ರಕಾರ ಎಲ್ಲ ಶಾಲೆಗಳು ಡಿಸೆಂಬರ್​ನೊಳಗೆ ವಿವರಗಳನ್ನು ಪ್ರಕಟಿಸುವಂತೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

ಏನಿದು ಪ್ರಕರಣ?: ಖಾಸಗಿ ಶಾಲೆಗಳು ತಮ್ಮ ಮನಬಂದಂತೆ ಶುಲ್ಕ ಪಡೆಯುತ್ತಿವೆ. ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸುತ್ತಿಲ್ಲವೆಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2018-19ನೇ ಸಾಲಿನ ಶೈಕ್ಷಣಿಕ ದಾಖಲಾತಿ ಪ್ರಕ್ರಿಯೆ ವೇಳೆ ಮಾರ್ಚ್ ತಿಂಗಳಿನಿಂದಲೇ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮುಂಬರುವ ಶೈಕ್ಷಣಿಕ ವರ್ಷದ ಶುಲ್ಕವನ್ನು ಪಾಲಕರಿಂದ ಪಾವತಿಸಿಕೊಳ್ಳುತ್ತಿವೆ ಎಂದು ಪ್ರಕರಣ ದಾಖಲಿಸಲಾಗಿತ್ತು.

ವಿಚಾರಣೆ ನಡೆಸಿದ ಹೈಕೋರ್ಟ್ 2022ರ ಮೇ 23ರಂದು ನೀಡಿರುವ ತೀರ್ಪಿನ ಪ್ರಕಾರ ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಉಲ್ಲೇಖಿಸಿರುವ ಮಾರ್ಗಸೂಚಿಯಂತೆ 2019-20ನೇ ಸಾಲಿನಿಂದ ಶುಲ್ಕ ನಿಗದಿ ಆದೇಶವು ಜಾರಿಗೆ ಬಂದಿದೆ. ಅದರಂತೆ ಎಲ್ಲ ಖಾಸಗಿ ಶಾಲೆಗಳು ಮುಂಬರುವ ವರ್ಷದ ಶುಲ್ಕದ ಮಾಹಿತಿಯನ್ನು ಪ್ರತಿ ವರ್ಷದ ಡಿಸೆಂಬರ್‌ನಲ್ಲಿಯೇ ಪ್ರಕಟಿಸುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net