ಗೌರಿ ಗಣೇಶ ಹಬ್ಬಕ್ಕೆ ಸೊಬಗು ತಂದ 'ಗೌರಿ ಹೂವು'! ಇದಕ್ಕುಂಟು ಹಲವು ಹೆಸರು

New Project(7)
Published on

ತಾಳಗುಪ್ಪ: ಗೌರಿ ಗಣೇಶ ಹಬ್ಬದ ಸಮೀಪಿಸುತ್ತಿದ್ದಂತೆ ಅರಳಿನಿಂತ 'ಗೌರಿ ಹೂವು' ಹಬ್ಬದ ಸಂಭ್ರಮ ಹೆಚ್ಚಿಸುತ್ತಿವೆ.

ಗೌರಿ ಹೂವು ಎಂದು ಕರೆಯಲ್ಪಡುವ ಕೆಂಪು ಅರಿಶಿಣ ಬಣ್ಣದ ಹೂವು ಪಶ್ಚಿಮಘಟ್ಟದ ಸಹಜ ಕಾಡಿನಲ್ಲಿ ತನ್ನಷ್ಟಕ್ಕೆ ಅರಳುವ ಜಾತಿಯ ಹೂವು. ಗೌರಿ ಗಣೇಶ ಹಬ್ಬದಲ್ಲಿ ಈ ಹೂವು ಪೂಜೆಗೆ ಶ್ರೇಷ್ಠ ಎನ್ನುವುದು ಮಲೆನಾಡ ಜನರ ನಂಬಿಕೆ.

ಗೌರಿ ಹೂವಿನ ವೈಜ್ಞಾನಿಕ ಹೆಸರು ಗ್ಲೊರಿಯೊಸಾ ಸುಪರ್ಬಾ. ಇಂಗ್ಲಿಷ್‌ನಲ್ಲಿ ಗ್ಲೋರಿ ಲಿಲ್ಲಿ, ಫ್ಲೇಮ್ ಲಿಲ್ಲಿ ಎಂದೂ ಕರೆಯುತ್ತಾರೆ. ದೇಶದ ವಿವಿಧ ಪ್ರದೇಶಗಳಲ್ಲಿ ಭಿನ್ನ ಹೆಸರುಗಳಿಂದ ಗುರುತಿಸಲ್ಪಟ್ಟಿದೆ. ಅರಳಿ ನಿಂತ ಹೂಗಳು ಬೆಂಕಿಯ ಜ್ವಾಲೆಯಂತೆ ಕಾಣುವುದರಿಂದ ಅಗ್ನಿಶಿಖೆ ಎಂದೂ, ಕೋಳಿ ಜುಟ್ಟಿನಂತೆ ಕಾಣುವುದರಿಂದ ಕೋಳಿಜುಟ್ಟಿನ ಹೂ, ಕೋಳಿಕುಟುಮ ಎಂದೂ ಕರೆಯುತ್ತಾರೆ. ಹೂವಿನ ಎಸಳುಗಳ ಕೆಳಭಾಗ ಹಳದಿ ಬಣ್ಣದಿಂದ ಕೂಡಿದ್ದು ಮೇಲ್ಭಾಗ ಕೆಂಪು ಕಿತ್ತಲೆ ಮಿಶ್ರಿತ ಬಣ್ಣದಿಂದ ಕೂಡಿರುತ್ತದೆ. ಕನ್ನಡ ಬಾವುಟವನ್ನು ನೆನಪಿಸುತ್ತವೆ. ಕೆಲವೆಡೆ ಗ್ರಾಮೀಣ ಭಾಗದಲ್ಲಿ ಬೆಂಕಿ ಹೂವು ಎಂದೂ ಹೇಳುವುದುಂಟು.

ಹೂವು ಹಳದಿ-ಕೆಂಪು ಮಿಶ್ರಿತ ಬಣ್ಣದ್ದಾದರೆ ಕಾಯಿ ಪೂರ ಕೆಂಪು ಬಣ್ಣದ್ದಾಗಿರುತ್ತೆ. ರಕ್ತವರ್ಣದ ಹಣ್ಣುಗಳು ನೋಡಲು ಆಕರ್ಷಕ. ಇದರ ಬೀಜ ವಿಷಯುಕ್ತವಾಗಿದ್ದು. ಔಷಧಕ್ಕೆ ಬಳಸಲಾಗುತ್ತಿದೆ.

ಗೌರಿ ಗಣೇಶ ಹಬ್ಬದ ವೇಳೆಗೆ ಸರಿಯಾಗಿ ಈ ಹೂವು ಅರಳುತ್ತೆ. ಹಾಗಾಗಿ ಇದಕ್ಕೆ 'ಗೌರಿ ಹೂವು' ಎನ್ನಲಾಗುತ್ತೆ. ಭಾದ್ರಪದ ಮಾಸದ ನಂತರ ಇದರ ಗಿಡಗಳು ಮಾಯವಾಗಿ ಗಡ್ಡೆಯಷ್ಟೆ ನೆಲದಲ್ಲಿ ಉಳಿದಿರುತ್ತದೆ. ಮತ್ತೆ ಮುಂದಿನ ವರ್ಷ ಗಿಡ ಚಿಗುರಿ ಹೂವು ಬಿಡುತ್ತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net