ಜ೧೩ ರಂದು ದೈವ ಆರಾಧಕರು ಹಾಗೂ ದೈವ ನರ್ತಕರ ಸಭೆ

Z P.M.RAVI 7
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿರುವ ದೈವ ಆರಾಧಕರು ಹಾಗೂ ದೈವ ನರ್ತಕರ ಸಭೆ ಜ.೧೩ ರಂದು ಬೆಳಗ್ಗೆ ೧೦ ಗಂಟೆಗೆ ಮಡಿಕೇರಿಯ ಬಾಲಭವನ ಸಭಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪಿ.ಎಂ.ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಿಲ್ಲೆಯಲ್ಲಿ ತುಳುನಾಡಿನ ದೈವಾರಾಧನೆಯ ಬಹಳಷ್ಟು ದೈವ ಕ್ಷೇತ್ರಗಳಿವೆ. ದೈವ ಆರಾಧಕರು ಹಾಗೂ ದೈವ ನರ್ತಕರು ಕೂಡ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ದೈವ ಮತ್ತು ದೈವಾರಾಧನೆಯನ್ನು ಅವಮಾನಿಸುವ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅವಮಾನಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


ಜಿಲ್ಲೆಯಲ್ಲಿರುವ ತುಳುನಾಡಿನ ದೈವ ಕ್ಷೇತ್ರಗಳ ಇತಿಹಾಸವನ್ನು ದಾಖಲೀಕರಣ ಮಾಡಿ ಪುಸ್ತಕದ ರೂಪದಲ್ಲಿ ಹೊರ ತರುವುದು. ದೈವಕೋಲ ಮತ್ತು ನೇಮೋತ್ಸವವನ್ನು ಕ್ರಮಬದ್ಧವಾಗಿ ನಡೆಸುವುದು. ದೈವಾರಾಧಕರು ಹಾಗೂ ದೈವ ನರ್ತಕರಿಗೆ ಸರಕಾರ ಘೋಷಿಸಿರುವ ಮಾಸಾಶನದ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡುವುದು. ದೈವಾರಾಧಕರು ಹಾಗೂ ದೈವ ನರ್ತಕರ ಸಂಘ ರಚಿಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ರವಿ ತಿಳಿಸಿದ್ದಾರೆ.


ಜಿಲ್ಲೆಯಲ್ಲಿ ಸುಮಾರು ೪೫ಕ್ಕೂ ಹೆಚ್ಚು ತುಳುನಾಡಿನ ದೈವಸ್ಥಾನಗಳಿದ್ದು, ಎಲ್ಲಾ ದೈವಸ್ಥಾನಗಳ ಆರಾಧಕರು ಹಾಗೂ ನರ್ತಕರು ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ ಅವರು, ಹೆಚ್ಚಿನ ಮಾಹಿತಿಗೆ ಮೊ.ಸಂ ೯೯೭೨೦ ೭೩೨೯೫ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net