ಬಡಾವಣೆಗೆ ಕೊನೆಗೂ ಬಂತು ಕಸದ ವಾಹನ

gls 12-kasa
ಗೊಳಸಂಗಿ ಮಾದರಿ ಬಡಾವಣೆಗೆ ಗುರುವಾರ ಆಗಮಿಸಿದ ಕಸದ ವಾಹನದಲ್ಲಿ ಸ್ಥಳೀಯ ನಿವಾಸಿ ಕಸ ಹಾಕುತ್ತಿರುವುದು.
Published on

ಗೊಳಸಂಗಿ: ಅಂತೂ ಬಹಳ ದಿನಗಳ ಬಳಿಕ ಗ್ರಾಪಂ ಕಸದ ವಾಹನ ಸ್ಥಳೀಯ ಮಾದರಿ ಬಡಾವಣೆಗೆ ಗುರುವಾರ ಆಗಮಿಸಿದ್ದರಿಂದ ಅಲ್ಲಿನ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.

ಪ್ರತಿ ವಾರಕ್ಕೆ ಎರಡು ಬಾರಿ ಬರುತ್ತಿದ್ದ ಕಸದ ವಾಹನ ಎರಡೂವರೆ ತಿಂಗಳಿನಿಂದ ಬಾರದ್ದರಿಂದಾಗಿ ಸ್ಥಳೀಯ ನಿವಾಸಿಗರಿಗೆ ತಲೆಬಿಸಿಯಾಗಿಸಿತ್ತು. ಕೂಡಿಟ್ಟ ಕಸ ಎಲ್ಲಿ ಸಾಗಿಸಬೇಕು. ಮನೆ ಆವರಣದಲ್ಲೇ ತುಂಬಿಟ್ಟಿದ್ದ ಕಸದ ಬಕೆಟ್‌ನಲ್ಲಿ ಮಳೆ ನೀರು ಸೇರಿ ಕೊಳೆತು ನಾರತೊಡಗಿತ್ತು. ಸಾಂಕ್ರಾಮಿಕ ರೋಗದ ಭೀತಿಯೂ ಕಾಡತೊಡಗಿತ್ತು. ಗತ್ಯಂತರವಿಲ್ಲದೆ ಕೆಲವರು ಹೊರ ವಲಯದಲ್ಲಿ ಚೆಲ್ಲಿ ಬರತೊಡಗಿದ್ದರು.

ಇದೆಲ್ಲವನ್ನೂ ಗಮನಿಸಿದ ‘ವಿಜಯವಾಣಿ’ ಪರಿಸರ ದಿನಾಚರಣೆ ಜೂ.5 ರಂದು ‘2 ತಿಂಗಳಿಂದ ಬಾರದ ಕಸದ ವಾಹನ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಗ್ರಾಪಂ ಆಡಳಿತ ವರ್ಗ ಕೊನೆಗೂ ಗುರುವಾರ ಮಾದರಿ ಬಡಾವಣೆಗೆ ಕಸದ ವಾಹನ ಕಳಿಸಿ ಶುಚಿತ್ವಕ್ಕೆ ಸಹಕಾರದ ಹಸ್ತ ಚಾಚಿತು. ಕಸದ ನೂತನ ವಾಹನದ ದುರಸ್ತಿ ಮತ್ತು ಬೇರೊಬ್ಬ ಚಾಲಕರು ಬರುವವರೆಗೆ ಆದ್ಯತೆಯ ಮೇರೆಗೆ ವಾರಕ್ಕೆ ಒಂದು ಬಾರಿ ಮಾದರಿ ಬಡಾವಣೆಗೆ ಕಸದ ವಾಹನ ಕಳಿಸುವುದಾಗಿ ಗ್ರಾಪಂ ಸಿಬ್ಬಂದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎರಡು ತಿಂಗಳಿಗೂ ಅಧಿಕ ದಿನಗಳಿಂದ ಕಸದ ವಾಹನ ಬಾರದೇ ಸಮಸ್ಯೆ ಎದುರಾಗಿತ್ತು. ಕೊನೆಗೂ ಗುರುವಾರ ಕಸದ ವಾಹನ ಬಂದು ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಇದು ಎಂದಿನಂತೆ ನಿರಂತರ ಬಂದರೆ ಉತ್ತಮ.

| ಲಕ್ಷಿಂಬಾಯಿ ಪ್ರಭು ಗುಡ್ಡದ, ಮಾದರಿ ಬಡಾವಣೆ ನಿವಾಸಿ ಗೊಳಸಂಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net