ಕಮ್ಯೂನಿಸ್ಟ್ ಮೈಂಡ್ ಸ್ವಾಮೀಜಿಗಳಿಂದ ಜಾತಿಯಲ್ಲಿ ಕಂದಕ

New Yatnal New 11
Published on

ಹುಬ್ಬಳ್ಳಿ : ವೀರಶೈವ-ಲಿಂಗಾಯತ ಎರಡೂ ಒಂದೇ. ಆದರೆ, ಕೆಲವು ಕಮ್ಯುನಿಸ್ಟ್ ಮೈಂಡ್ ಸ್ವಾಮೀಜಿಗಳು ಉದ್ದೇಶಪೂರ್ವಕವಾಗಿ ಕಂದಕ ನಿರ್ಮಾಣ ಮಾಡುತ್ತಿದ್ದಾರೆ. ವೀರಶೈವ, ಲಿಂಗಾಯತ ಸನಾತನ ಧರ್ಮದ ಒಂದು ಭಾಗ. ಇವರನ್ನು ಸನಾತನ ಧರ್ಮದಿಂದ ದೂರ ಮಾಡುವ ಹುನ್ನಾರ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದು ಶಬ್ಧವನ್ನು ಅಪಮಾನ ಮಾಡುವುದೇ ಕೆಲವೊಂದು ಮಠಾಧೀಶರ ಕೆಲಸವಾಗಿದೆ. ಹೋಮ, ಹವನ, ಹಿಂದು ಆಚರಣೆಗಳನ್ನು ಅವಮಾನಿಸುವುದೇ ಇವರ ಉದ್ದೇಶ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಲವರು ಬಸವಣ್ಣ ತಮ್ಮ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ. ಬಸವತತ್ವ ಹೇಳಿಕೊಳ್ಳುವ ಸ್ವಾಮೀಜಿಗಳು ಯಾಕೆ ಮನೆಗಳಲ್ಲಿ ಹೋಮ, ಹವನ ಮಾಡುತ್ತೀರಿ? ಯಾಕೆ ಪಾದಪೂಜೆ ಮಾಡಿಸಿಕೊಳ್ಳುತ್ತೀರಿ ಎಂದು ಪರಶ್ನಿಸಿದರು.

ಕೇಂದ್ರ ಸರ್ಕಾರ ಲಿಂಗಾಯತ, ವೀರಶೈವ ಎಂದು ಪ್ರತ್ಯೇಕ ಧರ್ಮದ ಮಾನ್ಯತೆ ಕೊಟ್ಟಿಲ್ಲ. ಎಲ್ಲರೂ ಲಿಂಗ ಪೂಜೆ ಮಾಡುತ್ತಾರೆ. ಧರ್ಮದಲ್ಲಿ ಹಿಂದು ಎಂದೂ, ಜಾತಿ ಕಾಲಂನಲ್ಲಿ ತಮ್ಮ ಜಾತಿಯನ್ನು ಬರೆಯಿಸಬೇಕು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಮುಸ್ಲಿಮರದ್ದೇ ಸರ್ಕಾರ ಇದ್ದಂತಾಗದೆ. ಸಂವಿಧಾನದ ಪ್ರಕಾರ ಮುಸ್ಲಿಮರಿಗೆ ಮೀಸಲಾತಿ ಕೊಡಲು ಬರುವುದಿಲ್ಲ. ಆದರೂ, ಅಸಂವಿಧಾನಿಕವಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿದೆ. ಸಿದ್ದರಾಮಯ್ಯ ಸರ್ಕಾರ ಲಿಂಗಾಯತರನ್ನು ಅವಮಾನಿಸಿದರೂ ಅಖಿಲ ಭಾರತ ವೀರಶೈವ ಮಹಾಸಭಾ ಈ ಬಗ್ಗೆ ಏಕೆ ಪ್ರಶ್ನಿಸಲಿಲ್ಲ? ಪಂಚಮಸಾಲಿ ಸಮಾಜದ ಮೇಲೆ ಪೊಲೀಸರು ಲಾಠಿ ಬೀಸಿದಾಗ ಏಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು.

ವೀರಶೈವ ಮಹಾಸಭಾ ವಿಸರ್ಜನೆ ಮಾಡಬೇಕು. ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ. ಖಂಡ್ರೆ ಕುಟುಂಬದ ಕೈಯಲ್ಲಿ ಈ ಮಹಾಸಭಾ ಇದೆ. ಇದರಿಂದ ಯಾವುದೇ ವೀರಶೈವ ಲಿಂಗಾಯತರಿಗೆ ಉಪಯೋಗವಿಲ್ಲ. ಕೆಲವರು ವೀರಶೈವ ಲಿಂಗಾಯತರನ್ನು ತಮ್ಮ ಕುರ್ಚಿ ಉಳಿಸಿಕೊಳ್ಳಲು ಬಳಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಹಾಭ್ರಷ್ಟ. ಯಡಿಯೂರಪ್ಪ ಉದ್ದೇಶ ಲಿಂಗಾಯತರಿಗೆ ಒಬಿಸಿ ಕೊಡುವುದಲ್ಲ. ತಮ್ಮ ಸ್ವಾರ್ಥಕ್ಕೆ ಸಮಾಜವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಜಾತಿ ಕಾಲಂನಲ್ಲಿ ಹಿಂದು ಬರೆಸುವಂತೆ ಜನರಿಗೆ ಹೇಳಿಲ್ಲ. ಅದನ್ನು ಸ್ವಾಮೀಜಿಗಳಿಗೆ ಬಿಟ್ಟಿರುವುದಾಗಿ ಹೇಳುತ್ತಿದ್ದಾರೆ. ಹಾಗಾದರೆ, ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಹಿಂದುಗಳ ಮತಗಳಿಂದ ಅಲ್ಲವೆ? ಬಿಜೆಪಿಗೆ ಮತಗಳನ್ನು ನೀಡಿರುವುದು ಹಿಂದು ಧರ್ಮದ ರಕ್ಷಣೆಗಾಗಿ. ಹಿಂದುತ್ವದ ಆಚರಣೆಗೆ ಬದ್ಧವಾಗಿದ್ದರೆ ಬಿಜೆಪಿಯಲ್ಲಿ ಮುಂದುವರಿಯಿರಿ. ಇಲ್ಲದಿದ್ದರೆ ಬಿಜೆಪಿ ಬಿಟ್ಟು ತೊಲಗಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net