

ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಶನಿವಾರ ಆಯೋಜಿಸಿರುವ 'ಜನಸ್ಪಂದನ' ಕಾರ್ಯಕ್ರಮಕ್ಕೆ ಯಾವುದೇ ವಿಘ್ನ ಬಾರದಿರಲೆಂದು ಸಮಾರಂಭದ ವೇದಿಕೆ ಮೇಲೆ ಶುಕ್ರವಾರ ಮಹಾಗಣಪತಿ ಹೋಮ ನಡೆಯಿತು.
ಕಾರ್ಯಕ್ರಮದ ಉಸ್ತುವಾರಿಗಳಲ್ಲಿ ಒಬ್ಬರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸೇವಾ ಕರ್ತೃವಾಗಿ ಭಾಗವಹಿಸಿದ್ದು, ತಲಾ ಒಬ್ಬ ಬ್ರಹ್ಮವರ್ಣಿ, ಆಚಾರ್ಯ ವರ್ಣಿ ನೇತೃತ್ವದಲ್ಲಿ ಎಂಟು ಜನ ಋತ್ವಿಜರು ಹೋಮ ನಿರ್ವಹಣೆಗೆ ನೆರವಾದರು.
ಬಿಜೆಪಿ ಯುವ ಪ್ರವೀಣ್ ನೆಟ್ಟಾರು ಸಾವಿನ ಹಿನ್ನೆಲೆ ಜು.28ರಂದು ಮೊದಲ ಬಾರಿಗೆ ಮುಂದೂಡಿಕೆಯಾಯಿತು. ನಂತರ ಬಯಲುಸೀಮೆ ಕಾರ್ಯಕರ್ತರು, ಮುಖಂಡರ ಒತ್ತಾಸೆ ಮೇರೆಗೆ ಸೆ.8ರಂದು ಸಮಾವೇಶ ಆಯೋಜಿಸಲು ಒಪ್ಪಿಗೆ ನೀಡಲಾಗಿತ್ತು. ಎಲ್ಲ ಸಿದ್ಧತೆಗಳಾಗಿದ್ದವು. ಆದರೆ ಸೆ.6ರಂದು ಸಚಿವ ಉಮೇಶ್ ಕತ್ತಿ ನಿಧನದಿಂದ ಎರಡನೇ ಬಾರಿ ಮುಂದೂಡಿಕೆಯಾಯಿತು.
ಈ ನಡುವೆ ಆ.28ರಂದು ಏರ್ಪಡಿಸುವ ಚಿಂತನೆ ನಡೆದಿತ್ತಾದರೂ ವರಿಷ್ಠರು ಸೆ.8ಕ್ಕೆ ಅಸ್ತು ಎಂದರು. ಕತ್ತಿ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಸೆ.11ಕ್ಕೆ ಮುಂದೂಡಿಕೆಯಾಯಿತು. ಆದರೆ ಸೆ.11ರಿಂದ ಪಿತೃಪಕ್ಷ ಶುರುವಾಗಲಿದ್ದು, ಈ ಅವಧಿಯಲ್ಲಿ ಕಾರ್ಯಕ್ರಮ ಮಾಡುವುದು ಒಳ್ಳೆಯದಲ್ಲವೆಂಬ ಸಲಹೆಗೆ ಓಗೊಟ್ಟು ಭಾನುವಾರದ ಬದಲಿಗೆ ಶನಿವಾರವೇ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.
ಒಂದಿಲ್ಲೊಂದು ಕಾರಣದಿಂದಾಗಿ ಪದೇಪದೆ ಮುಂದಕ್ಕೆ ಹೋದ ಹಿನ್ನೆಲೆಯಲ್ಲಿ ಮತ್ತೆ ವಿಘ್ನ ಉಂಟಾಗದಿರಲೆಂದು ಮಹಾ ಗಣಪತಿ ಹೋಮ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.