ಸ್ವಾತಂತ್ರ್ಯ ಇತಿಹಾಸ ತಿಳಿಸುವ ಕಾರ್ಯ

h11-Tiranga Rally 1
Published on

ಹುಬ್ಬಳ್ಳಿ: ಸ್ವಾತಂತ್ರ್ಯೊತ್ಸವ ನಿಮಿತ್ತ ಹುಬ್ಬಳ್ಳಿ-ಧಾರವಾಡ ಬಿಜೆಪಿ ಮಹಾನಗರ ಜಿಲ್ಲಾ ಘಟಕ ವತಿಯಿಂದ ನಗರದಲ್ಲಿ ಭಾನುವಾರ ಬೃಹತ್ ತಿರಂಗಾ ಬೈಕ್ ರ‍್ಯಾಲಿ ಏರ್ಪಾಟಾಗಿತ್ತು.

ನಗರದ ದುರ್ಗದಬೈಲ್ ಸರ್ಕಲ್​ನಿಂದ ಆರಂಭವಾದ ತಿರಂಗಾ ಬೈಕ್ ರ್ಯಾಲಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಬೈಕ್ ಚಲಾಯಿಸುವ ಮೂಲಕ ಚಾಲನೆ ನೀಡಿದರು.

ರ‍್ಯಾಲಿ ಉದ್ದಕ್ಕೂ ಬೋಲೋ ಭಾರತ್ ಮಾತಾಕೀ ಜೈ, ಬಿಜೆಪಿ ಪಕ್ಷಕ್ಕೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪರ ಜಯಘೊಷ ಮೊಳಗಿದವು. ರ‍್ಯಾಲಿ ಹಿನ್ನೆಲೆಯಲ್ಲಿ ರಸ್ತೆಯ ಎರಡೂ ಬದಿ ಅಂಗಡಿ, ಮುಂಗಟ್ಟುಗಳನ್ನು ಪೊಲೀಸರು ಕೆಲ ಹೊತ್ತು ಬಂದ್ ಮಾಡಿಸಿದ್ದರು. ನಂತರ ತಿರಂಗಾ ರ್ಯಾಲಿಯೂ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಕೊನೆಗೊಂಡಿತು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕರೆಯ ಮೇರೆಗೆ ಕಳೆದ 4-5 ವರ್ಷಗಳಿಂದ ಹರ್​ಘರ್ ತಿರಂಗಾ ಹಾಗೂ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ. ದೇಶದ ಧ್ವಜ, ಸ್ವಾತಂತ್ರ್ಯ ಇತಿಹಾಸ, ದೇಶದ ಬಗ್ಗೆ ಭಾವನಾತ್ಮಕ ಸಂಬಂಧ ಬೆಸೆಯುವುದು ಈ ರ್ಯಾಲಿಯ ಉದ್ದೇಶ ಎಂದರು.

ಆ. 15ರಂದು ಜಿಲ್ಲೆಯಾದ್ಯಂತ ಬಿಜೆಪಿ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಪ್ರತಿ ಮನೆ ಹಾಗೂ ವಾಣಿಜ್ಯ ಕಟ್ಟಡದ ಮೇಲೆ ತಿರಂಗಾ ಧ್ವಜ ಹಾರಿಸುವ ಕೆಲಸ ಮಾಡಲಾಗುವುದು. ಪ್ರತಿಯೊಬ್ಬರೂ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸ್ವಾತಂತ್ರ್ಯೊತ್ಸವವನ್ನು ಹಬ್ಬದಂತೆ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅದರಂತೆ ಅವಳಿ ನಗರದಲ್ಲಿ ಬೃಹತ್ ರ‍್ಯಾಲಿ ಹಾಗೂ ಹರ್​ಘರ್ ತಿರಂಗಾ ಧ್ವಜ ಹಾರಿಸುವ ಮೂಲಕ ಆಚರಣೆ ಮಾಡುತ್ತೇವೆ ಎಂದರು.

ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡರಾದ ಲಿಂಗರಾಜ ಪಾಟೀಲ, ಡಾ. ಕ್ರಾಂತಿಕಿರಣ, ವೆಂಕಟೇಶ ಕಾಟವೆ, ಅನೂಪ ಬಿಜವಾಡ, ಶಕ್ತಿ ಹಿರೇಮಠ, ಕರಿಯಪ್ಪ ಸುಣಗಾರ, ರವಿ ನಾಯಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net