ಬಳ್ಳಾರಿ : ಜನ ಸಾಮಾನ್ಯರಲ್ಲಿ ಕೋಮು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಜ.17, 18 ಮತ್ತು 19 ರಂದು ಕಲಬುರಗಿಯಲ್ಲಿ ರಾಜ್ಯ ಮಟ್ಟದ ಸೌಹಾರ್ದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಹಮತ ವೇದಿಕೆ ಮುಖ್ಯಸ್ಥ ಎಸ್.ಪನ್ನರಾಜ್ ಹೇಳಿದರು.
ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಮಾನವ ಬಂದುತ್ವ ವೇದಿಕೆ, ಸಹಮತ ವೇದಿಕೆ ಹಾಗೂ ದಲಿತ ಪ್ರಗತಿಪರ ಹಿಂದುಳಿದ ವರ್ಗಗಳ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜ.17 ರಂದು ಕಲಬುರಗಿಯ ಶ್ರೀಶರಣಬಸವೇಶ್ವರ ದೇವಸ್ಥಾನದಿಂದ ಮಹಾತ್ಮ ಬಸವೇಶ್ವರ ಮತ್ತು ಬಾಬಾಸಾಹೇಬರ ಪುತ್ಥಳಿ ಮಾರ್ಗವಾಗಿ ಸ್ವಾಜಾ ಬಂದೇನವಾಜ್ ದರ್ಗಾದವರೆಗೆ ನಮ್ಮ ನಡಿಗೆ ಶರಣ, ಸಂತ, ಸೂಫಿ ಪ್ರಜ್ಞೆಯೆಡೆಗೆ ಘೋಷಣೆಯಡಿಯಲ್ಲಿ ಸೌಹಾರ್ದ ಯಾತ್ರೆ ನಡೆಯಲಿದೆ. ಜ.18 ರಂದು ಭಾವೈಕ್ಯದ ಹೊನಲು: ಸಮನ್ವಯದ ಗಾಯನ ಗಮಲು ಘೋಷಣೆಯಡಿ ದಿನವಿಡೀ ತತ್ವಪದ, ಸೂಫಿ ಪದ, ವಚನ ಗಾಯನ ಕಾರ್ಯಕ್ರಮ ಹಾಗೂ ಜ.19 ರಂದು ಬಹುತ್ವ ಭಾರತದ ಜಾಗೃತ ಅಭಿಯಾನ ನಾಡಿನೆಲ್ಲೆಡೆಯಿಂದ ಪರಮಪೂಜ್ಯರು, ಸರ್ವರ್ಮಗಳ ನೇತಾರರು, ವಿಚಾರವಾದಿಗಳು, ಸಾಮಾಜಿಕ ಕಾರ್ಯಕರ್ತರು, ಮಾನವಹಕ್ಕುಗಳ ಹೋರಾಟಗಾರರು, ಅಖಿಲ ಕರ್ನಾಟಕದ ದುಡಿಯುವ ಜನರು ಸಮಾವೇಶಗೊಂಡು ಸಮತೆ-ಮಮತೆಗಳ ಸಂದೇಶ ಸಾರಲಿದ್ದಾರೆ ಎಂದರು. ಕೋಮುವಾದಿಗಳ ಆಕರ್ಷಕ ಮಾತುಗಳಿಗೆ ಮರುಳಾದ ನಮ್ಮ ಯುವಜನರು, ದಲಿತ ಮತ್ತು ಶೂದ್ರ ಸೇರಿದಂತೆ ಹಿಂದುಳಿದ ಯುವಜನರು ಅವರು ತೋಡಿದ ಖೆಡ್ಡಾಗಳಿಗೆ ಬೀಳುತ್ತಿದ್ದಾರೆ. ಧಾರ್ಮಿಕ ದ್ವೇಷಗಳಿಂದ ಕೋಮುದಂಗೆಗಳಲ್ಲಿ ನಿರತರಾಗಿ ಕೇಸು ಹಾಕಿಸಿಕೊಂಡು ಒದ್ದಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ವಿವಿಧ ಸಂಘಟನೆ ಮುಖಂಡರಾದ ಮಾನಯ್ಯ, ನಿಷ್ಠಿ ರುದ್ರಪ್ಪ, ರಮೇಶ, ಹುಸೇನಪ್ಪ, ರಫೀಕ್, ರಿಜ್ವಾನ್, ವಿಜಯ ಕುಮಾರ, ಸತ್ಯಬಾಬು ಇದ್ದರು.