

ಬೆಳ್ತಂಗಡಿ: ವಿದೇಶಗಳಿಗೆ ಹೋಲಿಸಿದರೆ ಭಾರತೀಯರಲ್ಲಿ ಉಳಿತಾಯ ವ್ಯವಸ್ಥೆ ಬಹಳಷ್ಟು ಕುಟುಂಬವನ್ನು ಆಧರಿಸುತ್ತದೆ. ಆದರೆ ಉಳಿತಾಯ ವ್ಯವಸ್ಥೆಯಲ್ಲೂ ಒಂದು ಚೌಕಟ್ಟು ಮತ್ತು ಶಿಸ್ತನ್ನು ತಂದುಕೊಟ್ಟ ಸಂಸ್ಥೆಯಿದ್ದರೆ ಅದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ಬೆಳ್ತಂಗಡಿ ಎಸ್.ಬಿ.ಐ. ಮುಖ್ಯ ವ್ಯವಸ್ಥಾಪಕ ಪದ್ಮನಾಭ ನಾಯಕ್ ಹೇಳಿದರು.
ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭಾವನದಲ್ಲಿ ಶನಿವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಬಿ.ಸಿ.ವಿಭಾಗದ ನಿರ್ದೇಶಕ ಪ್ರವೀಣ್ ಎಂ.ಸಿ. ಮಾತನಾಡಿ, ಜನರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಾಮಾಜಿಕವಾಗಿ ಸಂಘಟಿಸುವ ಕೆಲಸವಾಗಬೇಕಿದೆ. ಅದನ್ನು ಒಂದೇ ಸೂರಿನಡಿ ನೀಡುವ ಕಾರ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಂದಾಗಿದೆ. ಜನ ಸಂಘಟನೆಯಿಂದ ಎಲ್ಲ ರೀತಿಯ ಅಭಿವೃದ್ಧಿ ಸಾಧ್ಯ. ಗ್ರಾಮಾಭಿವೃದ್ಧಿ ಯೋಜನೆ ಜನರಿಗೆ ಸಾಲ ಪಡೆದುಕೊಳ್ಳುವ ಅರ್ಹತೆಯನ್ನು ಸೃಷ್ಟಿಸುತ್ತದೆಯೇ ಹೊರತು ಮೈಕ್ರೋ ಫೈನಾನ್ಸ್ ಅಲ್ಲ. ಪಾರದರ್ಶಕ ವ್ಯವಸ್ಥೆಯ ಮೂಲಕ ಬ್ಯಾಂಕ್ನ ಒಂದು ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಬೆಳ್ತಂಗಡಿ ತಾಲೂಕಿನ 88 ಒಕ್ಕೂಟಗಳ ನಿಕಟಪೂರ್ವ 440, ನೂತನ 440 ಹಾಗೂ 440 ದಾಖಲಾತಿ ಸದಸ್ಯರು ಭಾಗವಹಿಸಿದರು. ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಆರ್., ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಎಂ.ಐ.ಎಸ್ ಯೋಜನಾಧಿಕಾರಿ ಪ್ರೇಮನಾಥ್, ಉಜಿರೆ ವಲಯದ ಉಮರ್ ಸಾಹೇಬ್, ಕೊಕ್ಕಡ ವಲಯದ ಸೇಸಪ್ಪ ಮೂಲ್ಯ, ಲಾಯಿಲ ವಲಯದ ಅಬ್ದುಲ್ ರಝಾಕ್, ನೆರಿಯ ವಲಯದ ಸತೀಶ್ ಧರ್ಮಸ್ಥಳ ವಲಯದ ರಾಜೇಶ್, ಇಂದಬೆಟ್ಟು ವಲಯದ ಅಧ್ಯಕ್ಷ ಚಂದ್ರಶೇಖರ್ ಸಹಿತ 9 ವಲಯದ ಅಧ್ಯಕ್ಷರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಿಂದ ಯೋಜನೆಯ ಸಾಲ ಸೌಲಭ್ಯ ಹಾಗೂ ನಿಯಮಾವಳಿ ಸೇರಿದಂತೆ ವಿವರವುಳ್ಳ ಮಾಹಿತಿ ಕಾರ್ಯಾಗಾರ ನಡೆಯಿತು. ಬೆಳ್ತಂಗಡಿ ವಲಯ ಯೋಜನಾಧಿಕಾರಿ ಸುರೇಂದ್ರ ಕುಮಾರ್ ಪ್ರಸ್ತಾವಿಸಿ, ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾ ವಂದಿಸಿದರು. ಯೋಜನೆ ಕೃಷಿ ಅಧಿಕಾರಿ ರಾಮ್ ಕುಮಾರ್ ನಿರೂಪಿಸಿದರು.
ಧರ್ಮಸ್ಥಳ ಬಿ.ಸಿ. ಟ್ರಸ್ಟ್ ಯೋಜನೆ ನಮ್ಮ ಬ್ಯಾಂಕ್ನ ಪ್ರತಿನಿಧಿಯಿದ್ದಂತೆ. ಬ್ಯಾಂಕ್ ನಿರ್ವಹಿಸುವ ಕೆಲಸ ಬಿ.ಸಿ.ಟ್ರಸ್ಟ್ ಮಾಡುತ್ತದೆ. ಉಳಿತಾಯ ಎಂಬುದು ಕೇವಲ ನಮಗಾಗಿ ಇರದೆ ಅದು ಬ್ಯಾಂಕ್ ಮೂಲಕ ಹೂಡಿಕೆ ಮಾಡಿ ಸಮಾಜದಲ್ಲಿ ಚಾಲ್ತಿಯಲ್ಲಿರುವಂತೆ ಮಾಡಬೇಕು. ಹಾಗಾದಾಗ ಉಳಿತಾಯಕ್ಕೆ ಅರ್ಥಬರುತ್ತದೆ. ಪದ್ಮನಾಭ ನಾಯಕ್ ಬೆಳ್ತಂಗಡಿ ಎಸ್.ಬಿ.ಐ. ಮುಖ್ಯ ವ್ಯವಸ್ಥಾಪಕ
ಪದ್ಮನಾಭ ನಾಯಕ್ ಬೆಳ್ತಂಗಡಿ ಎಸ್.ಬಿ.ಐ. ಮುಖ್ಯ ವ್ಯವಸ್ಥಾಪಕ