

ಜಗಳೂರು: ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಅವರ ಪ್ರತಿಭೆ ಹೊರಹಾಕುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಂತಹ ಕಾರ್ಯಕ್ರಮಗಳು ಅತ್ಯಂತ ಸಹಕಾರಿ ಎಂದು ಬಿಇಒ ಹಾಲಮೂರ್ತಿ ಹೇಳಿದರು.
ತಾಲೂಕಿನ ರಸ್ತೆಮಾಕುಂಟೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಿದರಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಜತೆಗೆ ಮಕ್ಕಳು ಕಡ್ಡಾಯವಾಗಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮನಸ್ಸು ಅರಳಿಸಿಕೊಳ್ಳುವತ್ತ ಗಮನ ಹರಿಸಬೇಕು. ಪ್ರತಿ ಮಕ್ಕಳಲ್ಲಿ ಒಂದೊಂದು ಪ್ರತಿಭೆ ಅಡಗಿದ್ದು, ಅವುಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವ ಕೆಲಸ ಶಿಕ್ಷಕರು ಹಾಗೂ ಪಾಲಕರು ಮಾಡಬೇಕು ಎಂದು ಸಲಹೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್ ಮೇಗಳಮನೆ ಮಾತನಾಡಿ, ಶಾಲಾ ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡುವ ಕೆಲಸ ಶಿಕ್ಷಕರು ಮಾಡಬೇಕು. ಜತೆಗೆ ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿ ತಿಳಿಸುವ ಕೆಲಸ ಮಾಡಿ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಡಿ.ಡಿ. ಹಾಲಪ್ಪ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸಕ್ಕೆ ಮಾತ್ರ ಸೀಮಿತವಾಗದೆ ಸರ್ವತೋಮುಖ ಅಭಿವೃದ್ಧ್ದಿಗೆ ಅವಶ್ಯವಿರುವ ಸಂಸ್ಕೃತಿ, ಸಂಸ್ಕಾರ ಹಾಗೂ ಕ್ರೀಡೆಯಂತಹ ಪಠ್ಯೇತರ ಚಟುವಟಿಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು ಎಂದರು.
ಎಸ್‌ಟಿಎಂಸಿ ಉಪಾಧ್ಯಕ್ಷ ಜಯಪ್ಪ, ಸದಸ್ಯರಾದ ಬಿ.ಎನ್. ಸುರೇಶ್ ರೆಡ್ಡಿ, ಬಸವರಾಜ್, ವೆಂಕಟಬ್ರಹ್ಮಚಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತೇಶ್, ಸಿಆರ್‌ಪಿ ಮಂಜುನಾಥ್, ಎನ್‌ಜಿಒ ಮಾಜಿ ಕಾರ್ಯದರ್ಶಿ ವೀರೇಶ್, ಬಸವರಾಜ್ ಮತ್ತಿತರರಿದ್ದರು.