

ಹರಿಹರ: ಮಕ್ಕಳಲ್ಲಿನ ಸೂಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಅತ್ಯಂತ ಸೂಕ್ತ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಕಮಲಾಪುರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಶಾಲೆಯಲ್ಲಿ ಗುರುವಾರ ನಡೆದ ಭಾನುವಳ್ಳಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಮಗುವಿನಲ್ಲೂ ಒಂದಿಲೊಂದು ಪ್ರತಿಭೆ ಇದ್ದೇ ಇರುತ್ತದೆ. ಆದರೆ, ಅದನ್ನು ಗುರುತಿಸಿ ಹೊರತರುವ ಕಾರ್ಯವನ್ನು ಶಿಕ್ಷಕರು, ಪಾಲಕರು ಮಾಡಬೇಕಿದೆ ಎಂದು ಹೇಳಿದರು.
ಕ್ಲಸ್ಟರ್ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಯನ್ನು ತಾಲೂಕು ಮಟ್ಟಕ್ಕೆ ಕಳುಹಿಸಲಾಗುವುದು. ಅಲ್ಲಿಯೂ ಉತ್ತಮ ಪ್ರತಿಭೆ ಪ್ರದರ್ಶಿಸಿದರೆ ಜಿಲ್ಲಾ, ರಾಜ್ಯಮಟ್ಟಕ್ಕೆ ಕಳುಹಿಸಿ ಪ್ರೋತ್ಸಾಹಿಸಲಾಗುವುದೆಂದರು.
ತೀರ್ಪುಗಾರರು ಯಾವುದೇ ಪೂರ್ವಗ್ರಹ ಪೀಡಿತರಾಗದೇ ನೈಜ ಪ್ರತಿಭೆಯನ್ನು ಗುರುತಿಸಿ ತೀರ್ಪು ನೀಡಬೇಕು ಎಂದು ತಿಳಿ ಹೇಳಿದರು.
ಭಾನುವಳ್ಳಿ ಸಿಆರ್‌ಪಿ ಪ್ರಕಾಶ್ ಕರಡಿ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಅಗಾಧ ಪ್ರತಿಭೆ ಅಡಗಿರುತ್ತದೆ. ಶಿಕ್ಷಕರು ಅಂತಹ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕೆಂದರು.
ಸಿರಿಗೆರೆ ಮುಖಂಡ ನಾಗನಗೌಡ ಮಾತನಾಡಿ, ಪ್ರಬುದ್ಧ ದೇಶ ಕಟ್ಟಲು ಶಕ್ತರಿರುವ ಮಕ್ಕಳನ್ನುಗುರುತಿಸಲು ಸಾಧ್ಯವಾಗುವುದು ಶಿಕ್ಷಕರಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರತಿಭಾ ಕಾರಂಜಿಯಂತಹ ವೇದಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂದರು.
ಮುಖಂಡರಾದ ಪರಮೇಶಗೌಡ, ಈಶ್ವರಪ್ಪ ಮತ್ತಿತರರು ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಸ್. ಈಶ್ವರ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ, ಮುಖ್ಯಶಿಕ್ಷಕ ಮಂಜುನಾಥ್, ಶಾಲಾ ಶಿಕ್ಷಕರ ಸಂಘದ ಶರಣಕುಮಾರ್ ಹೆಗಡೆ, ಗ್ರಾಪಂ ಮಾಜಿ ಅಧ್ಯಕ್ಷರಾದ ಮಲ್ಲಿಕಾಜುನ್, ಕೆ.ಬಿ. ರಮೇಶ್, ಗ್ರಾಮದ ಮುಖಂಡರಾದ ಬಸವನಗೌಡ, ಹಾಲಸಿದ್ದಪ್ಪ, ಎಂ. ಶಾಂತಪ್ಪ, ಕುರುವತ್ಯಪ್ಪ, ರುದ್ರಪ್ಪ ನಾಗಪ್ಪನವರ, ಗುರುಬಸಪ್ಪ, ದೊಡ್ಡಬಸಪ್ಪ, ವಸಂತ್, ಸುರೇಶ್, ಎನ್.ಪಿ. ಕೊಟ್ರೇಶ್ ಮತ್ತಿತರರಿದ್ದರು.
20 ಶಾಲೆಗಳ 450 ಮಕ್ಕಳು ಹಾಗೂ 25 ತೀರ್ಪುಗಾರರು ಪಾಲ್ಗೊಂಡಿದ್ದರು. ಸಂಜೆ ಸಮಾರೋಪದಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.
ಶಿಕ್ಷಕ ಪ್ರಭುಗೌಡ ಪಾಟೀಲ್ ಸ್ವಾಗತಿಸಿದರು. ರಾಮನಗೌಡ ಪ್ಯಾಟಿ ನಿರೂಪಿಸಿದರು.