ಕೌಶಲ, ಉದ್ಯಮಶೀಲತೆ ಅಭಿವೃದ್ಧಿಗೆ ವೇದಿಕೆ

3 vikram 3
Published on

ಧಾರವಾಡ: ಸ್ವಯಂ ಉದ್ಯೋಗದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಯುವ ಜನರಲ್ಲಿ ಕೌಶಲ, ಉದ್ಯಮಶೀಲತೆ ಅಭಿವೃದ್ಧಿಪಡಿಸಿ ಭವಿಷ್ಯ ರೂಪಿಸಲು ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಉತ್ತಮ ವೇದಿಕೆಯಾಗಿದೆ. ಸಿಡಾಕ್ ತರಬೇತಿಗಳನ್ನು ಯುವ ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸ್ಥೆ ನಿರ್ದೇಶಕ ಡಾ. ವೀರಣ್ಣ ಹವಾಲ್ದಾರ್ ಹೇಳಿದರು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಸಹಯೋಗದಲ್ಲಿ ಮಾಳಮಡ್ಡಿಯ ಲಿಂಗರಾಜ ಪ್ರೆಸ್ ಆವರಣದ ಭವಾನಿ ನೃತ್ಯ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 30 ದಿನಗಳ ಮೊಬೈಲ್ ಹ್ಯಾಂಡ್​ಸೆಟ್ ರಿಪೇರಿ ಮತ್ತು ಸೇವಾ ಕೌಶಲ ಆಧಾರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಮಾರ್ಗಸೂಚಿ ಅನುಸರಿಸಿ ಸಿಡಾಕ್ ಸಂಸ್ಥೆ 2 ತಿಂಗಳಿನಿಂದ ಪುನಃ ತರಬೇತಿಗಳನ್ನು ಪ್ರಾರಂಭಿಸಿದೆ. ಸಂಪನ್ಮೂಲ ವ್ಯಕ್ತಿಗಳ ಮೂಲಕ ವೈವಿಧ್ಯಮಯ ವೃತ್ತಿ ಕೌಶಲ ಅಭಿವೃದ್ಧಿ ತರಬೇತಿ ಆಯೋಜಿಸುತ್ತಿದೆ. ನಂತರ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್​ಗಳ ಮೂಲಕ ಆರ್ಥಿಕ ನೆರವು, ಸಾಲಸೌಲಭ್ಯ ಕಲ್ಪಿಸಲು ಸಹಕರಿಸುತ್ತದೆ ಎಂದರು.

ಸ್ಟೇಟ್​ಬ್ಯಾಂಕ್ ಆಫ್ ಇಂಡಿಯಾ ವಲಯ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ಜೆ.ಸಿ. ಚಂದ್ರ ಮಾತನಾಡಿ, ನಮ್ಮ ದೇಶ ಅಷ್ಟೇ ಅಲ್ಲ ಜಗತ್ತಿನಾದ್ಯಂತ ಜನಸಂಖ್ಯೆಗಿಂತಲೂ ಅಧಿಕ ಸಂಖ್ಯೆಯಲ್ಲಿ ಮೊಬೈಲ್ ಹ್ಯಾಂಡ್​ಸೆಟ್​ಗಳಿವೆ. ಮೊಬೈಲ್​ಫೋನ್ ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಉತ್ತಮ ಸೇವೆ, ರಿಪೇರಿ, ಗ್ರಾಹಕರ ವಿಶ್ವಾಸಾರ್ಹತೆ, ವ್ಯವಹಾರ ಕೈಗೊಳ್ಳುವ ಜಾಣ್ಮೆ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಡಾ. ಚಂದ್ರಪ್ಪ ಮಾತನಾಡಿ, ಪ್ರಸ್ತುತ ಜಿಡಿಪಿಗೆ ಸೇವಾ ವಲಯದ ಕೊಡುಗೆ ಅಧಿಕವಾಗಿದೆ. ಯುವ ಜನರು ಸೇವಾವಲಯದಲ್ಲಿನ ಅವಕಾಶಗಳನ್ನು ಗುರುತಿಸಿ ವೃತ್ತಿಕೌಶಲ ಬೆಳೆಸಿಕೊಳ್ಳಬೇಕು. ಕೌಶಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಲವು ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಸಿಡಾಕ್ ಜಂಟಿ ನಿರ್ದೇಶಕ ಸಿ.ಎಚ್. ಅಂಗಡಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಮಹೇಂದ್ರ ಸಿಂಗ್, ರೋಹಿಣಿ ಘಂಟಿ, ರಂಜನಾ ಪೇಟೆ, ಚಂದ್ರಶೇಖರ ರಾಹುತರ್, ಮೌನೇಶ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net