ಹೋಟೆಲ್ ಮಯೂರ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ

ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ಹೋಟೆಲ್ ಮಯೂರದ ಆವರಣದಲ್ಲಿ ಶನಿವಾರ ರಾತ್ರಿ ಕಾಡಾನೆ ಕಾಣಿಸಿಕೊಂಡಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವುದು.
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ಹೋಟೆಲ್ ಮಯೂರದ ಆವರಣದಲ್ಲಿ ಶನಿವಾರ ರಾತ್ರಿ ಕಾಡಾನೆ ಕಾಣಿಸಿಕೊಂಡಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವುದು.
Published on


ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ಮಯೂರ ಬಿಳಿಗಿರಿ ಬಳಿ ಶನಿವಾರ ರಾತ್ರಿ ಕಾಡಾನೆ ಕಾಣಿಸಿಕೊಂಡಿದೆ.

ಹಲವು ತಿಂಗಳಿಂದ ಈ ಭಾಗದಲ್ಲೇ ಓಡಾಡುತ್ತಿರುವ ಹಾಗೂ ವಕ್ರದಂತ ಹೊಂದಿರುವ ಕಾಡಾನೆ ಇದಾಗಿದೆ. ಇಲ್ಲಿನ ಗೇಟ್ ಮೂಲಕ ಬಂದ ಕಾಡಾನೆ ಹೋಟೆಲ್‌ನ ಆವರಣದಲ್ಲಿ ಓಡಾಡಿದೆ. ಇದರಿಂದ ಗಾಬರಿಗೊಂಡ ಸಿಬ್ಬಂದಿ ಕೂಡಲೇ ಆನೆಯನ್ನು ಹೊರಕ್ಕೆ ಅಟ್ಟುವ ಕೆಲಸ ಮಾಡಿದ್ದು, ನಂತರ ಗೇಟ್ ಹಾಕಿದ್ದಾರೆ. ಈ ದೃಶ್ಯ ಇಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪದೇ ಪದೆ ಕಾಟ ಕೊಡುತ್ತಿರುವ ಆನೆ: ಈ ಆನೆ 2 ತಿಂಗಳಿಂದಲೂ ಇಲ್ಲೇ ಓಡಾಡುತ್ತಿದೆ. ಕಳೆದ ವಾರ ಇದೇ ಆನೆ ಬೆಟ್ಟದ ದೇಗುಲದ ಬಳಿ ಇರುವ ಕಮರಿಯ ವೀವ್ ಪಾಯಿಂಟ್ ಮೇಲೆ ಹಾಕಿರುವ ತಡೆಗೋಡೆಯ ಕಬ್ಬಿಣದ ಕಂಬಿಗಳನ್ನು ಕಿತ್ತಿತ್ತು. ಅಲ್ಲದೆ ದೊಡ್ಡ ರಥಧ ಬೀದಿಯಲ್ಲಿರುವ ಅಂಗಡಿಗಳ ಮೇಲೆ ದಾಳಿ ಮಾಡಿ ಅಲ್ಲಿರುವ ಶೀಟ್‌ಗಳನ್ನು ಮುರಿದಿತ್ತು. ಈ ಹಿಂದೆ ವಿದ್ಯುತ್ ಕಂಬಗಳನ್ನು ಮುರಿದಿತ್ತು. ನಂತರ ಕೆಸ್‌ಆರ್‌ಟಿಸಿ ಬಸ್ ಅನ್ನು ಅಟ್ಟಾಡಿಸಿತ್ತು. ಇದಾದ ಬಳಿಕ ಅರಣ್ಯ ಇಲಾಖೆಯವರು ಇದನ್ನು ಕಾಡಿಗಟ್ಟಲು ಹರಸಾಹಸ ಮಾಡಿದ್ದರು. ಕಾಡಿಗಟ್ಟಿದ್ದ ಮಾರನೆ ದಿನವೇ ಇದು ಮತ್ತೆ ಕಾಣಿಸಿಕೊಂಡಿತ್ತು.

ಆಹಾರದ ಕೊರತೆ ಕಾರಣವೇ?: ಈ ಆನೆಗೆ 50 ವರ್ಷ ವಯಸ್ಸು ಎಂದು ಅಂದಾಜಿಸಲಾಗಿದೆ. ಸುಲಭವಾಗಿ ಸಿಗುವ ಆಹಾರವನ್ನು ಅರಸಿ ಇಲ್ಲಿಗೆ ಪದೇ ಪದೆ ಬರುತ್ತಿರಬಹುದು ಎಂದು ಊಹಿಸಲಾಗಿದೆ. ಆದರೆ ಈವರೆಗೂ ಇದು ಯಾರೊಬ್ಬರ ಮೇಲೂ ದಾಳಿ ಮಾಡಿಲ್ಲ. ಆದರೆ ಒಂದು ಬಾರಿ ಇದು ರೊಚ್ಚಿಗೆದ್ದರೆ ತೊಂದರೆಯಾಗಬಹುದು ಎಂಬುದು ಸ್ಥಳೀಯರ ಆತಂಕ.

ಈ ಆನೆ 50 ವರ್ಷ ಪ್ರಾಯದ್ದಾಗಿದೆ. ಹಲಸು, ಮಾವು ಸೇರಿದಂತೆ ಇತರ ಹಣ್ಣು ಬಿಡುವ ಸಮಯದಲ್ಲಿ ಇದು 2 ವರ್ಷಗಳಿಂದ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿತ್ತು. ನಂತರ ಮತ್ತೆ ಕಾಡಿಗೆ ತೆರಳುತ್ತಿತ್ತು. 2 ತಿಂಗಳಿಂದ ಈ ಆನೆ ದೇಗುಲ, ರಥದ ಬೀದಿ, ಬಸ್ ನಿಲ್ದಾಣ, ಬಿಳಿಗಿರಿಭವನ ಸೇರಿದಂತೆ ಕೆಲವೆಡೆ ಬೀಡು ಬಿಟ್ಟಿದೆ. ಇದನ್ನು ಕಾಡಿಗಟ್ಟಲು ನಾವು ಭಾನುವಾರ ಕಾರ್ಯಾಚರಣೆ ಆರಂಭಿಸಿದ್ದು, ಇಲ್ಲಿಂದ 8 ಕಿ.ಮೀ. ದೂರದ ದೊಡ್ಡ ಸಂಪಿಗೆ ಕಾಡಿನ ಕಡೆಗೆ ಇದನ್ನು ಅಟ್ಟಲಾಗಿದೆ. ಈಗ ದೂರಕ್ಕೆ ಅಟ್ಟಿರುವುದರಿಂದ ಇದು ಹಿಂದಿರುಗಿ ಬರುವ ಸಾಧ್ಯತೆ ಕಡಿಮೆ ಇದೆ. ಈ ಬಗ್ಗೆ ನಮ್ಮ ಇಲಾಖೆ ಗಮನ ಇಟ್ಟಿದ್ದು ಮತ್ತೆ ಇದು ಇಲ್ಲಿಗೆ ಬಂದರೆ ಯಾವ ಕ್ರಮ ವಹಿಸಬೇಕು ಎಂದು ತೀರ್ಮಾನಿಸಲಾಗುವುದು ಎಂದು ಆರ್‌ಎಫ್‌ಒ ನಾಗೇಂದ್ರನಾಯಕ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net