ಗನ್‌ಹೌಸ್ ವೃತ್ತದಲ್ಲಿ ರಾಜೇಂದ್ರ ಶ್ರೀ ಪ್ರತಿಮೆ ಸ್ಥಾಪನೆಗೆ ವಿರೋಧಿಸಿ ಕಾಲ್ನಡಿಗೆ ಜಾಥಾ

13
Published on

ಮೈಸೂರು: ಹೈ ಕೋರ್ಟ್ ಆದೇಶ ಉಲ್ಲಂಘಿಸಿ ನಗರದ ಗನ್‌ಹೌಸ್ ವೃತ್ತದಲ್ಲಿ ರಾಜೇಂದ್ರ ಶ್ರೀಗಳ ಪ್ರತಿಮೆ ಸ್ಥಾಪಿಸಲಾಗುತ್ತಿದೆ ಎಂದು ಆರೋಪಿಸಿ ಕಾನೂನುಬಾಹಿರ ಪ್ರತಿಮೆ ತೆರವು ಹೋರಾಟ ಸಮಿತಿಯಿಂದ ನಗರದಲ್ಲಿ ಶನಿವಾರ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ನಗರದ ದೊಡ್ಡಕೆರೆ ಮೈದಾನದಿಂದ ಸಿದ್ದಾರ್ಥನಗರ ಬಡಾವಣೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿದ ನೂರಾರು ಜನ, ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡು ಪ್ರತಿಮೆ ತೆರವುಗೊಳಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ಗನ್‌ಹೌಸ್ ವೃತ್ತದಲ್ಲಿ ಪ್ರತಿಮೆ ಸ್ಥಾಪನೆ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಿದ್ದರೂ ರಾತ್ರೋರಾತ್ರಿ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಪುತ್ಥಳಿಗಳನ್ನು ನಿರ್ಮಾಣ ಮಾಡುವಂತಿಲ್ಲ ಎಂದು 2013ರಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿದೆ. ಅದನ್ನು ಹೈಕೋರ್ಟ್ ಉಲ್ಲೇಖಿಸಿತ್ತು. ಹೀಗೆ ಹೈಕೋರ್ಟ್ ವಿರೋಧವಿದ್ದರೂ ನಗರದ ಗನ್‌ಹೌಸ್ ವೃತ್ತದಲ್ಲಿ ರಾತ್ರಿಯಲ್ಲಿ ಕಾಮಗಾರಿ ನಡೆಸಿ ಪ್ರತಿಮೆ ನಿಲ್ಲಿಸಿರುವುದು ಖಂಡನೀಯ ಎಂದು ದೂರಿದರು.
ಗನ್‌ಹೌಸ್ ವೃತ್ತದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಮೆ ಸ್ಥಾಪಿಸಬೇಕೆಂಬ ಬೇಡಿಕೆ ಇತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶವಿರುವುದರಿಂದ ಯಾವುದೇ ಪ್ರತಿಮೆ ಸ್ಥಾಪನೆ ಮಾಡಬಾರದು, ಮೈಸೂರು ಪಾರಂಪರಿಕತೆಗೆ ಧಕ್ಕೆಯಾಗಬಾರದು. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಆಗ್ರಹಿಸಿದರು.
ಕೂಡಲೇ ಕಾಮಗಾರಿ ನಿಲ್ಲಿಸಿ, ಪ್ರತಿಮೆ ತೆರವುಗೊಳಿಸಬೇಕು, ಇಲ್ಲದಿದ್ದರೆ ನಿರಂತರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸಮಿತಿಯ ಸಂಚಾಲಕ ಭಾಸ್ಕರ್, ಎಚ್.ಎಂ.ಟಿ.ಲಿಂಗರಾಜೇ ಅರಸ್, ಮುಖಂಡರಾದ ಲಕ್ಷ್ಮೀಕಾಂತ ರಾಜೇ ಅರಸ್, ಮಹದೇವು, ಮೈ.ಕಾ.ಪ್ರೇಮ್‌ಕುಮಾರ್, ನಗರಪಾಲಿಕೆ ಮಾಜಿ ಸದಸ್ಯೆ ವಿದ್ಯಾ ಅರಸ್ ಇತರರು ಇದ್ದರು.

ಬಿಗಿ ಪೊಲೀಸ್ ಭದ್ರತೆ
ರಾಜೇಂದ್ರ ಶ್ರೀಗಳ ಪ್ರತಿಮೆ ಸ್ಥಾಪನೆ ವಿರೋಧಿಸಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗನ್‌ಹೌಸ್ ಬಳಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಕಾನೂನು ಬಾಹಿರ ಪ್ರತಿಮೆ ತೆರವು ಹೋರಾಟ ಸಮಿತಿ ಗನ್‌ಹೌಸ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾಗೆ ಅವಕಾಶ ಕೇಳಿದ್ದರಾದರೂ ಪೊಲೀಸರು ಅವಕಾಶ ನೀಡಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net