

ಕೊಳ್ಳೇಗಾಲ: ಸೇವೆಯಿಂದ ನಿವೃತ್ತಿ ಹೊಂದಿದ ಹನೂರಿನ ಬಾಲಕರ ವಿದ್ಯಾರ್ಥಿ ನಿಲಯದ ನಿಲಯ ಪಾಲಕ ವಿಜಯ್ ಕುಮಾರ್ ಅವರ ಬೀಳ್ಕೊಡುಗೆ ಸಮಾರಂಭವನ್ನು ಶನಿವಾರ ಪಟ್ಟಣದ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೇಶವಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. 39 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ನಿಲಯಪಾಲಕ ವಿಜಯಕುಮಾರ್ ಅವರಿಗೆ ಬೀಳ್ಕೊಡಲಾಯಿತು. ಇವರೊಂದಿಗೆ ಅಡುಗೆ ಸಿಬ್ಬಂದಿ ಪುಟ್ಟುಸಿದ್ದಮ್ಮ ಅವರನ್ನೂ ಕಚೇರಿ ವತಿಯಿಂದ ಬೀಳ್ಕೊಡಲಾಯಿತು.
ಪರಿಶಿಷ್ಟ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿ ಕೆ.ಮಂಜುಳಾ ಮಾತನಾಡಿ, ಈಗಿನ ಪರಿಸ್ಥಿತಿ ಮತ್ತು ಒತ್ತಡದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿವೃತ್ತಿ ಹೊಂದುವುದು ಪುಣ್ಯದ ಕೆಲಸ. ವಿಜಯ್ ಕುಮಾರ್ ಅವರು ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ಇವರು ಸಲ್ಲಿಸಿದ ಸೇವೆಯಿಂದ ಮೂರು ಮಕ್ಕಳು ವೈದ್ಯರಾಗಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.
ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ದಾಸಿರತಿ ಚಿಕ್ಕಬಸವಯ್ಯ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಿಂದ ನಿವೃತ್ತಿ ಹೊಂದಿದವರಿಗೆ ಕೊಳ್ಳೇಗಾಲ ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬಿಳ್ಕೊಡುಗೆ ಸಮಾರಂಭ ನಡೆದಿರುವುದು ಇದೇ ಮೊದಲು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೇಶವಮೂರ್ತಿ ಮಾತನಾಡಿ, ವಿಜಯಕುಮಾರ್ ತಾಲೂಕಿನ ಎಲ್ಲ ನಿಲಯ ಪಾಲಕರ ಬಗ್ಗೆ ಕಾಳಜಿ ಹೊಂದಿದ್ದರು. ಎಲ್ಲರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದರು ಎಂದರು.
ಸಮಾರಂಭದಲ್ಲಿ ಮರಿಸ್ವಾಮಿ ಗೌಡ , ಸಿಗಬತ್‌ಉಲ್ಲಾ, ಹನುಮಂತು, ಶಾಂತರಾಜು, ಕೆ. ಲಕ್ಷ್ಮಿ , ಮಹದೇವ, ಕಾಂತರಾಜು, ಜ್ಯೋತಿ, ಮಂಜುಳಾ, ಚಂದ್ರಮ್ಮ, ಭವ್ಯಾ, ವಸಂತಾ, ಶ್ರೂನಿವಾಸ್ ಇತರರಿದ್ದರು.