ಕೇಳುಗರನ್ನು ಮೋಡಿದ ಜಾನಪದ ಗೀತೆ

33
Published on

ಮೈಸೂರು: ಅರಮನೆ ಅಂಗಳದಲ್ಲಿ ಜಾನಪದ ಹಾಡುಗಳು ರಿಂಗುಣಿಸಿ ಮೆಲುಕು ಹಾಕುವಂತೆ ಮಾಡಿತು.
ದಸರಾ ಮಹೋತ್ಸವದ ಅಂಗವಾಗಿ ಅರಮನೆ ವೇದಿಕೆಯಲ್ಲಿ ಮಂಗಳವಾರ ಡಾ.ಕಾ.ರಾಮೇಶ್ವರಪ್ಪ ಮತ್ತು ತಂಡದ ಜಾನಪದ ಗೀತೆ ಕೇಳುಗರನ್ನು ಮೋಡಿ ಮಾಡಿತು.
ಸಿದ್ದಪ್ಪಾಜಿ ಕಂಡಾಯ ಹೊತ್ತು ಬಿರುದು, ಬಾವಲಿಗಳೊಂದಿಗೆ ಸಿದ್ದಯ್ಯ ಸ್ವಾಮಿ ಬನ್ನಿ ಹಾಡಿನೊಂದಿಗೆ ವೇದಿಕೆ ಏರಿದ್ದು, ಸಿದ್ದಪ್ಪಾಜಿ ಪರಂಪರೆಯನ್ನು ತೊರಿಸಿಕೊಟ್ಟರು.
ಬಳಿಕ ಹಳೆ ಮೈಸೂರು ಭಾಗದ ಮತ್ತೋರ್ವ ಸಾಂಸ್ಕೃತಿಕ ರಾಯಭಾರಿ ಮಾದಪ್ಪನನ್ನು ಸ್ಮರಿಸುವ ‘ಮಲ್ಲಿಗೆ ಹೂವಾಗಿ ಚೆಲ್ಲಿತ್ತು ನಿನ್ನ ಪರಸೆ ಚೆಲ್ಲಾಟಗಾರ ಮಾದಪ್ಪ ನಿನ್ನ ಪರಸೆ’ ಹಾಡುತ್ತ ವೇದಿಕೆಯಲ್ಲಿ ಗಾಯಕರು ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
‘ಬೆಳಗುವ ಬಳ್ಳಿಯಾ ಚುಕ್ಕಿಯೂ ಮೂಡಿತು’ ಗೀತೆ ಮುಂಜಾನೆಯ ಗ್ರಾಮೀಣ ಬದುಕನ್ನು ಕಟ್ಟಿಕೊಟ್ಟಿತು.
ನಂಜುಂಡೇಶ್ವರನನ್ನು ನೆನೆಯುವ ‘ತಿಂಗ ತಿಂಗಳಿಗೂ ಚೆಂದಾ ನಂಜನಗೂಡು… ಗಂಧ ತುಂಬೈತೆ ಗುಡಿಗೆಲ್ಲಾ’ ಹಾಡು ಭಕ್ತ ಭಾವ ಮೂಡಿದರೆ, ‘ತಿಂಗಳು ಮುಳುಗಿದವೋ ರಂಗೋಲಿ ಬೆಳಗಿದವೋ’, ‘ಶಿವನು ಭಿಕ್ಷೆಕ್ಕೆ ಬಂದ ನೀಡು ಬಾರೆ ತಂಗಿ’ ಜಾನಪದ ಲೋಕಕ್ಕೆ ಕೊಂಡೋಯ್ದಂತಿತ್ತು.
‘ಚಂದ್ರವಳ್ಳಿ ತೋಟದಲ್ಲಿ ಕಾಯಿ ಸೋಪ್ಪು ಕ್ಯೂಯೋರು ಯಾರು…?, ‘ಹಿಟ್ಟು ಮಾಡಿ ಸೋಪ್ಪು ಮಾಡಿ ಹಿಟ್ಟು ಇಕ್ಕೆದೆ ಹೊದೆ ಎಲೆನಾರಿ’, ಬಳಿಕ ಎಲ್ಲೋ ಜೋಗಪ್ಪ ನಿನ್ನರಮನೆ, ಎಲ್ಲೋ ಜೋಗಪ್ಪ ನಿನ್ನ ತಳುಮಾನೆ’ ಜಾನಪದ ಗೀತೆಗಳು ಮನಸ್ಸು ಉಲ್ಲಾಸದಿ ತೇಲುಂತೆ ಮಾಡಿತು.
ಇದಕ್ಕೂ ಮುನ್ನ ಸೋಸಲೆ ಗಂಗಾಧರ್ ಮತ್ತು ತಂಡ ನಾಲ್ವಡಿ ಅವರನ್ನು ಕುರಿತ ಗೀತೆಗಳು ಮೈಸೂರು ಸಂಸ್ಥಾನದ ಗತವೈಭವವನ್ನು ಕಣ್ಣು ಮುಂದೆ ಕಟ್ಟಿಕೊಟ್ಟಂತೆ ಇತ್ತು. ವಿದ್ವಾನ್ ಶಿವಶಂಕರಸ್ವಾಮಿ ಮತ್ತು ತಂಡದ ರಿದಮ್ಸ್ ಆಫ್ ಇಂಡಿಯಾ ವಾದ್ಯ ಸಂಗೀತ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net