

ಧಾರವಾಡ: ಜಾನಪದ ಸಾಹಿತ್ಯದಲ್ಲಿ ಮಹಿಳೆಯರದೇ ಪ್ರಧಾನ ಪಾತ್ರ. ಮಹಿಳೆಯರ ಜೀವನದ ಅನುಭವಗಳೇ ಜಾನಪದ ಹಾಡುಗಳಾಗಿ ರೂಪಗೊಂಡಿವೆ ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಜಯಶ್ರೀ ಗುತ್ತಲ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-2025 ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಜಾನಪದ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಒಳನೋಟಗಳಿವೆ. ತಮ್ಮ ಬದುಕಿನ ನೋವು-ನಲಿವುಗಳನ್ನು ಹಾಡಿನ ಮೂಲಕ ಹೊರ ಹಾಕಿ ಜಾನಪದ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ. ಕುಟುಂಬ ನಿರ್ವಹಣೆ ಜತೆ ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಅಭಿನಂದನೀಯ ಎಂದರು.
ಅತಿಥಿಯಾಗಿ ಆಗಮಿಸಿದ್ದ ಮಾಜಿ ಮೇಯರ್ ಪೂರ್ಣಾ ಪಾಟೀಲ ಮಾತನಾಡಿ, ಜನಪದರ ಜೀವನದ ಸಮಗ್ರ ಚಿತ್ರಣವೇ ಜಾನಪದ ಸಾಹಿತ್ಯದಲ್ಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಮೇಯರ್ ಡಾ.ಹನಮಂತ ಡಂಬಳ ಮಾತನಾಡಿ, ಜಯಶ್ರೀ ಗುತ್ತಲ ಇಂದು ಭೌತಿಕವಾಗಿ ಇಲ್ಲದಿದ್ದರೂ ಎಸ್.ಬಿ. ಗುತ್ತಲ ಅವರು ದತ್ತಿ ಇಡುವ ಮೂಲಕ ಅವರನ್ನು ಸ್ಮರಿಸುತ್ತಾ ಜೀವಂತವಾಗಿರಿಸಿದ್ದಾರೆ. ಜಯಶ್ರೀ ಗುತ್ತಲ ಅವರು ಸಂಗೀತ ಪರಂಪರೆಯಿಂದ ಬಂದವರಾಗಿದ್ದಾರೆ. ಹೀಗಾಗಿ ಜಾನಪದದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಎಲ್ಲ ಮಹಿಳಾ ಮಂಡಳದ ಹಾಡು ಕೇಳಿ ಸಂತಸವಾಯಿತು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಪೂರ್ವಭಾವಿಯಾಗಿ ಜರುಗಿದ ಮೂಲ ಜಾನಪದ ಹಾಡುಗಳ ಸ್ಪರ್ಧೆಯನ್ನು ಡಾ.ಆನಂದ ಪಾಂಡುರಂಗಿ ಉದ್ಘಾಟಿಸಿದರು. ಸ್ಪರ್ಧೆಯಲ್ಲಿ 36 ಮಹಿಳಾ ಮಂಡಳಗಳು ಭಾಗವಹಿಸಿದ್ದವು. ಹುಬ್ಬಳ್ಳಿಯ ವಾಗ್ದೇವಿ ಮಹಿಳಾ ಮಂಡಳದವರು ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ ಸ್ಥಾನ ಪಡೆದುಕೊಂಡು 2025ರ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ ತಮ್ಮದಾಗಿಸಿಕೊಂಡರು. ದ್ವಿತೀಯ ಸ್ಥಾನವನ್ನು ಹುಬ್ಬಳ್ಳಿ ಶ್ರೀಗೌರಿ ಭಜನಾ ಮಂಡಳ ಪಡೆದರೆ, ಧಾರವಾಡದ ರುಕ್ಷ್ಮೀಣಿ ಪಾಂಡುರಂಗ ಭಜನಾ ಮಂಡಳಿ ತೃತೀಯ ಬಹುಮಾನ ಪಡೆದರು.
ಧಾರವಾಡದ ತುಂಗಭದ್ರಾ ಮಹಿಳಾ ವೇದಿಕೆ, ಗಾನ ಚಿಂತನಾ ಮಹಿಳಾ ಮಂಡಳ ಮತ್ತು ಶ್ರೀರಾಮ ಜಯರಾಮ ಗುಂಪು ಮಹಿಳಾ ಮಂಡಳದವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಸ್ಪರ್ಧೆಯ ನಿರ್ಣಾಯಕರಾಗಿ ಎನ್.ಆರ್.ಕುಲಕರ್ಣಿ, ವಿಜಯೇಂದ್ರ ಅರ್ಚಕ, ಶ್ರುತಿ ಕುಲಕರ್ಣಿ ಆಗಮಿಸಿದ್ದರು. ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಕೃತಿಕಾ ಸತ್ಯಬೋದ ಗುತ್ತಲ ಮೂಲ ಜಾನಪದ ಹಾಡುಗಳ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ದತ್ತಿದಾನಿ ಎಸ್.ಬಿ.ಗುತ್ತಲ ದತ್ತಿ ಕುರಿತು ಮಾತನಾಡಿದರು. ನಿರ್ಣಾಯಕರಾಗಿ ಶ್ರುತಿ ಕುಲಕರ್ಣಿ, ವಿಜಯೇಂದ್ರ ಅರ್ಚಕ, ಎನ್.ಆರ್.ಕುಲಕರ್ಣಿ ಭಾಗವಹಿಸಿದ್ದರು.
ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ.ಜಿನದತ್ತ ಹಡಗಲಿ, ಶ್ರೀಧರ ಕುಲಕರ್ಣಿ ಇದ್ದರು. ಶಂಕರ ಕುಂಬಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು.