ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ

SRP_21-01(a)jpj
Published on

ಶ್ರೀರಂಗಪಟ್ಟಣ: ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳು ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ಪಟ್ಟಿ ಮಾಡಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲೂಕಿನ ಕಸಬಾ ಹೋಬಳಿಯ ನಗುವನಹಳ್ಳಿ, ಮೇಳಾಪುರ, ಮಹದೇವಪುರ ಬೆಳಗೊಳ ಹೋಬಳಿಯ ಪಾಲಹಳ್ಳಿ, ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಜನರ ಸಮಸ್ಯೆ ಆಲಿಸಿ ಮಾತನಾಡಿದರು.

ಬಗೆಹರಿಸಬಹುದಾದ ಸಮಸ್ಯೆಗಳೇ ಜನರಿಂದ ಕೇಳಿಬರುತ್ತಿದ್ದು, ಅಧಿಕಾರಿಗಳು ಜನರಿಗೆ ಸ್ಪಂದಿಸಬೇಕು. ವೃದ್ಧಾಪ್ಯ, ಗೃಹಲಕ್ಷ್ಮಿ ಯೋಜನೆ ಸಮಸ್ಯೆಯನ್ನು ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ತ್ವರಿತವಾಗಿ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.

ತಾಲೂಕಿನ ನಗುವನಹಳ್ಳಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು, ಕಸಬಾ ಹೋಬಳಿಯಿಂದ ತಾಲೂಕು ಕೇಂದ್ರಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ. ನಗುವನಹಳ್ಳಿ ಗೇಟ್ ಬಳಿಯ ಅಂಡರ್ ಪಾಸ್ ಬಳಿ ಅವೈಜ್ಞಾನಿಕ ಸಂಚಾರ ವ್ಯವಸ್ಥೆಯಿಂದ ಅಪಘಾತಗಳು ಹೆಚ್ಚಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮದಲ್ಲಿರುವ 4 ಎಕರೆ ಗ್ರಾಮ ಠಾಣಾ ಸ್ಥಳವನ್ನು(ಸುಣ್ಣದಗೂಡು) ಆಸ್ಪತ್ರೆ ಅಥವಾ ಗ್ರಾಮದ ಅಭಿವೃದ್ಧಿಗೆ ಬಳಸಿಕೊಳ್ಳಲು ಸಹಕಾರ ನೀಡಬೇಕು. ಗ್ರಾಮದಲ್ಲಿ ಹಾದುಹೋಗಿರುವ ಪುರಾತನ ವಿರಿಜಾ ನಾಲೆ ಅವ್ಯವಸ್ಥೆಯಿಂದ ಕೂಡಿದ್ದು, ಶುಚಿಗೊಳಿಸಬೇಕು. ಕನ್ನಂಬಾಡಿ ಜಲಾಶಯದಿಂದ ಕಟ್ಟು ಪದ್ಧತಿಯಡಿ ನೀರು ಹರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಜನರ ಬೇಡಿಕೆಗಳನ್ನು ಪಟ್ಟಿ ಮಾಡಿ ಶೀಘ್ರ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ತಾಲೂಕಿನ ಮೇಳಾಪುರ ಹಾಗೂ ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಸಮಸ್ಯೆಗಳ ಪಟ್ಟಿ ಮುಂದಿಟ್ಟರು. ಈ ಭಾಗದಲ್ಲಿ ನಿಗದಿತ ಸಮಯಕ್ಕೆ ಬಸ್‌ಗಳ ಸಂಚಾರವಿಲ್ಲ. ಗ್ರಾಮೀಣ ಭಾಗದಲ್ಲಿ ಬೀದಿ ದೀಪಗಳ ವ್ಯವಸ್ಥೆಯಿಲ್ಲ. ಬಡ ಜನರು ವಿದ್ಯುತ್ ಸಂಪರ್ಕ ಪಡೆಯಲು ಮುಂಗಡ ಹಣ ಪಾವತಿ ಮಾಡುವಂತೆ ಸೆಸ್ಕ್ ಸಿಬ್ಬಂದಿ ಒತ್ತಡ ಹೇರುತ್ತಿದ್ದಾರೆ. ಹಲವು ನಿರಾಶ್ರಿತರಿಗೆ ನಿವೇಶನ ಮಂಜೂರಾಗಿಲ್ಲ ಎಂದು ಸಭೆಯ ಗಮನಸೆಳೆದರು. ಸಮಸ್ಯೆಗಳನ್ನು ಆಲಿಸಿದ ಬಳಿಕ ಸ್ಥಳದಲ್ಲೇ ಇದ್ದ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸಮಸ್ಯೆಗಳನ್ನು ಶಾಸಕರು ಬಗೆಹರಿಸಿದರು.

ತಾಲೂಕಿನ ಬೆಳಗೊಳ ಹೋಬಳಿಯ ಪಾಲಹಳ್ಳಿ ಗ್ರಾಮದ ಒಳಭಾಗದಲ್ಲಿ ರಸ್ತೆ ಹಾಗೂ ಚರಂಡಿ ಹಾಳಾಗಿದ್ದು, ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಜತೆಗೆ ಮಾಸಾಶನ ಕೊಡಿಸುವಂತೆ ಅಳಲು ತೋಡಿಕೊಂಡಾಗ, ಸ್ಥಳದಲ್ಲೇ ಪರಿಹಾರ ಕಂಡುಕೊಂಡರು. ಇದೇ ಸಂದರ್ಭ ಇ-ಸ್ವತ್ತು, ಭಾಗ್ಯಲಕ್ಷ್ಮಿ ಬಾಂಡ್, ಅಂಗವಿಕಲರಿಗೆ ಸೌಲಭ್ಯ ಪತ್ರ ಮತ್ತು ಚೆಕ್ ವಿತರಿಸಲಾಯಿತು. ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಅಧ್ಯಕ್ಷ ಜವರಪ್ಪ, ಉಪಾಧ್ಯಕ್ಷೆ ಸುಮಾ, ಗ್ರಾಮ ಪಂಚಾಯಿತಿ ಸದಸ್ಯೆ ಮಾಜಿ ಅಧ್ಯಕ್ಷ ಭಾಸ್ಕರ್, ಮಾಜಿ ಸದಸ್ಯ ಶಿವರಾಜು, ಪಿಡಿಒ ಶಿಲ್ಪಾ ಹಾಗೂ ಪಾಲಹಳ್ಳಿ ಗ್ರಾಪಂ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷೆ ಅಕ್ಷತಾ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ದೇವರಾಜು, ಪಿಡಿಒ ರವಿ, ವಿಎ ಮಹೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net